ಕಾಸರಗೋಡು: ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ 'ವಿಜಿಲೆನ್ಸ್ ಪ್ರಾಜೆಕ್ಟ್ ಥಂಡರ್' ಯೋಜನೆಯನ್ವಯ ನಡೆಸಿದ ಕಾರ್ಯಾಚರಣೆಯಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಜಿಲ್ಲಾ ಮೈನಿಂಗ್ ಆಂಡ್ ಜಿಯೋಲಜಿ ಕಚೇರಿಯ ಮಿನರಲ್ ರೆವನ್ಯೂ ಅಧಿಕಾರಿ, ಕಣ್ಣೂರು ಚಿರಕುನ್ನು ನಿವಾಸಿ ಪಿ.ಪಿ. ಶ್ರೀಧರನ್ (49)ನನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕಣ್ಣೂರು ವಿಜಿಲೆನ್ಸ್ ಡಿವೈಎಸ್ಪಿ ಬಾಬು ಪೆರಿಂಜೋತ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.
ಕಣ್ಣೂರು ಚೆರುಕುನ್ನು ನಿವಾಸಿಯೊಬ್ಬರು ಉದ್ದಿಮೆ ನಡೆಸಲು ಅನುಮತಿಗಾಗಿ 2025 ಜೂನ್ ತಿಂಗಳಲ್ಲಿ ಜಿಯೋಲಜಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅನುಮತಿ ನೀಡಲು ವಿಳಂಬವುಂಟಾಗುತ್ತಿರುವ ಬಗ್ಗೆ ವಿಜಿಲೆನ್ಸ್‍ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅನುಕೂಲ ತೀರ್ಪು ಅವರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಯೋಲಜಿ ಕಚೇರಿ ಅಧಿಕಾರಿಗಳ ಸೂಚನೆ ಪ್ರಕಾರ ದೂರಗಾರ, ಸಂಬಂಧಪಟ್ಟ ದಾಖಲೆಗಳನ್ನು ಕಾಜರುಪಡಿಸಿದರೂ, ಅನುಮತಿ ಪತ್ರ ನೀಡದೆ, 30ಸಾವಿರ ರೂ. ಹಣಕ್ಕಾಗಿ ಅಧಿಕಾರಿ ಬೇಡಿಕೆಯಿರಿಸಿದ್ದನು. ನಂತರ 15ಸಾವಿರಕ್ಕೆ ಮಾತುಕತೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಕಣ್ಣೂರು ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


