ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 9ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿ ಕಡ್ಡಾಯಗೊಳಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಕ್ರಮವು ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
'ತ್ರಿಭಾಷಾ ನೀತಿಯನ್ನು ದಯವಿಟ್ಟು 9ನೇ ತರಗತಿಯಿಂದ ಜಾರಿಗೊಳಿಸಬೇಡಿ. ಇದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಿದಂತಾಗುತ್ತದೆ. ಹೊಸ ಭಾಷೆಯನ್ನು ಪರಿಚಯಿಸುವುದಿದ್ದರೆ ಅದನ್ನು 5 ಅಥವಾ 6ನೇ ತರಗತಿಯಿಂದ ಅನುಷ್ಠಾನಗೊಳಿಸುವುದು ಸೂಕ್ತ' ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ, ಆರ್. ಮಹಾದೇವನ್ ಅವರ ಪೀಠವು ಹೇಳಿದೆ.
'9ನೇ ತರಗತಿಯು ಒತ್ತಡದಿಂದಲೇ ತುಂಬಿರುತ್ತದೆ. ಈ ಒತ್ತಡ 8ನೇ ತರಗತಿಯಿಂದಲೇ ಪ್ರಾರಂಭವಾಗುತ್ತದೆ. ದಯವಿಟ್ಟು ಮೂರನೆಯ ಭಾಷೆಯನ್ನು 9ನೇ ತರಗತಿಯಿಂದ ಜಾರಿಗೊಳಿಸಿ, ಮಕ್ಕಳ ಶೈಕ್ಷಣಿಕ ಹೊರೆಯನ್ನು ಹೆಚ್ಚಿಸಬೇಡಿ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಕಾಳಜಿಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿ' ಎಂದು ಕೇಂದ್ರದ ಪರವಾಗಿ ಹಾಜರಾದ ವಕೀಲರಿಗೆ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರು ಸೂಚಿಸಿದರು.
ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲೂ ಜವಾಹರ್ ನವೋದಯ ವಿದ್ಯಾಲಯ (ಜಿಎನ್‌ವಿ) ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಬಿಎಸ್‌ಇ ಶಾಲೆಗಳಲ್ಲಿ ಅನುಸರಿಸುವ ತ್ರಿಭಾಷಾ ನೀತಿಯ ಪಠ್ಯಕ್ರಮ, ಹಿಂದಿ ಹೇರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರವು 'ಜಿಎನ್‌ವಿ' ಸ್ಥಾಪನೆಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡ ಬಿ.ವಿ ನಾಗರತ್ನಾ ಅವರು, 'ಆಗ 9ನೇ ತರಗತಿಯಲ್ಲಿ ಯಾವ ಭಾಷೆ ಅಧ್ಯಯನ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು. ಎರಡನೆಯ ಭಾಷೆಯಾಗಿ ಹಿಂದಿ ಅಥವಾ ಕನ್ನಡ ಆಯ್ಕೆ ಮಾಡಿಕೊಳ್ಳಲು ಅಥವಾ ಸಂಸ್ಕೃತವನ್ನೂ ಕಲಿಯಲು ಅವಕಾಶ ಇತ್ತು. ಕನ್ನಡ, ಹಿಂದಿ ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ಮೂರನೆಯ ಭಾಷೆಯಾಗಿ ಸಂಸ್ಕೃತ ಕಲಿಯಬಹುದಿತ್ತು. ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರನೆಯ ಭಾಷೆಯನ್ನು ಮಾಧ್ಯಮಿಕ ಹಂತದಲ್ಲೇ ಕಲಿಯುತ್ತಿದ್ದರು' ಎಂದರು.
ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಪೀಠವು ನೇರವಾಗಿ ಸಿಬಿಎಸ್‌ಇ ತ್ರಿಭಾಷಾ ನೀತಿ ಜಾರಿಯ ಬಗ್ಗೆ ವಿಚಾರಣೆ ನಡೆಸಿಲ್ಲ. ಆದರೆ, ಶಾಲೆಯಲ್ಲಿ ಮೂರನೆಯ ಭಾಷೆಯನ್ನು ಯಾವ ಹಂತದಲ್ಲಿ ಜಾರಿಗೊಳಿಸಬಹುದು ಎನ್ನುವುದರ ಬಗ್ಗೆ ಅವಲೋಕನ ನಡೆಸಿತು. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ.
ತ್ರಿಭಾಷಾ ನೀತಿ ಜಾರಿಗೆ ಸಂಬಂಧಿಸಿ ಸಿಬಿಎಸ್‌ಇ ಹೊರಡಿಸಿದ್ದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಇತ್ತೀಚೆಗೆ ನಿರಾಕರಿಸಿತ್ತು.
- ನೀವು ನಿಮ್ಮ ಶಿಕ್ಷಣ ವ್ಯವಸ್ಥೆ ಹೊಂದಿರಬಹುದು ಆದರೆ ಕೇಂದ್ರ ಸರ್ಕಾರದ 'ಜಿಎನ್‌ವಿ' ಶಾಲೆಗಳನ್ನು ತಡೆಯಬೇಡಿ. ಇದು ಕೇಂದ್ರದ ಯೋಜನೆ ಎಂಬ ಮನೋಭಾವ ಸಲ್ಲ.
ಬಿ.ವಿ.ನಾಗರತ್ನಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಹಿಂದಿ ಬದಲು ಸಂಸ್ಕೃತವಾದರೆ ಸಮಸ್ಯೆ ಏನು?
ತಮಿಳುನಾಡು ಸರ್ಕಾರದ ಆಕ್ಷೇಪವನ್ನು ಪರಿಶೀಲಿಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನಾ ಅವರು 'ತ್ರಿಭಾಷಾ ನೀತಿಯು ಹಿಂದಿಯನ್ನು ಮೂರನೆಯ ಭಾಷೆಯಾಗಿ ಕಡ್ಡಾಯಗೊಳಿಸಿಲ್ಲ ಎನ್ನುವುದು ಪೀಠದ ಗಮನಕ್ಕೆ ಬಂದಿದೆ. ಶಾಲೆಗಳಲ್ಲಿ ರಾಜ್ಯ ಭಾಷೆಯನ್ನು ಕಲಿಸಬೇಕು ಇಂಗ್ಲೀಷ್ ಅನ್ನು ಕಲಿಸಬೇಕು ಮತ್ತು ಯಾವುದೇ ಮೂರನೆಯ ಭಾಷೆಯನ್ನು ಕಲಿಸಬಹುದು' ಎಂದು ತ್ರಿಭಾಷಾ ನೀತಿ ಹೇಳುತ್ತದೆಯೇ ಹೊರತು 'ಹಿಂದಿ' ಎಂದು ನಿರ್ದಿಷ್ಟವಾಗಿ ಹೇಳಿಲ್ಲ. ನಿಮಗೆ (ತಮಿಳುನಾಡು) ಹಿಂದಿ ಬೇಡ ಆಗಲಿ ಸಂಸ್ಕೃತ ಆದರೆ ಸಮಸ್ಯೆ ಏನು?' ಎಂದು ಅರ್ಜಿದಾರರನ್ನು ಪ್ರಶ್ನಿದರು.

