ನವದೆಹಲಿ: ಭಾರತೀಯ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ನೀಲಿಯಿಂದ ಕೇಸರಿಗೆ ಬದಲಾಯಿಸಿರುವುದಕ್ಕೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶದ ಐಕ್ಯತೆಯು ಅಹಿಂಸೆ, ಸತ್ಯ ಮತ್ತು ಸೋದರತ್ವದಲ್ಲಿ ಬೇರೂರಿದೆ. ಈ ಮೌಲ್ಯಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಆಗಸ್ಟ್ 1ರಿಂದ 30ರವರೆಗೆ ನಡೆಯಲಿರುವ ಎಫ್‌ಐಎಚ್ ಪುರುಷರ ಮತ್ತು ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದೆ. ಇದೇ ವಿಚಾರವಾಗಿ ಪ್ರಿಯಾಂಕಾ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಕಾಲೆಳೆದಿದ್ದಾರೆ.
'ಅವರು (ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು) ಜೆರ್ಸಿಯನ್ನು ಬದಲಾಯಿಸಲಿ ಅಥವಾ ಶಿಕ್ಷಣ ನೀತಿಯ ಮೂಲಕ ಇತಿಹಾಸವನ್ನು ಮತ್ತೆ ಬರೆಯಲು ಪ್ರಯತ್ನಿಸಲಿ, ಅವರು ಏನೇ ಮಾಡಿದರೂ... ದೇಶದ ಯುವಜನತೆ ಏನು ಯೋಚಿಸುತ್ತಾರೆ ಎಂಬುದನ್ನು ನೀವು ನೋಡಿದ್ದೀರಿ. ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಯುವಕರು ಏನು ಹೇಳುತ್ತಿದ್ದಾರೆಂಬುದನ್ನು ನೀವು ಕೇಳಿದ್ದೀರಿ. ಇದುವೇ ದೇಶದ ಧ್ವನಿ' ಎಂದಿದ್ದಾರೆ.
'ದೇಶದ ಸ್ವಾತಂತ್ರ್ಯ ಸಂಗ್ರಾಮವು ಅಹಿಂಸೆ ಮತ್ತು ಸತ್ಯದ ತಳಹದಿ ಮೇಲೆ ನಿರ್ಮಾಣವಾಗಿತ್ತು. ಇದರಲ್ಲಿ ಆರ್‌ಎಸ್‌ಎಸ್ ಯಾವುದೇ ಪಾತ್ರವಹಿಸಿಲ್ಲ. ಇಡೀ ದೇಶಕ್ಕೆ ಸತ್ಯ ಏನೆಂದು ತಿಳಿದಿದೆ. ತಿಳಿಯದಿದ್ದವರು ಈಗ ಆರ್‌ಎಸ್‌ಎಸ್‌ನ ನೈಜ ಉದ್ದೇಶಗಳು ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿತ್ತು. ದೇಶದ ಮೂಲಭೂತ ಮೌಲ್ಯಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
'ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಹಿಂಸಾಚಾರಕ್ಕೆ ಎಷ್ಟೇ ಪ್ರಚೋದನೆ ನೀಡಿದರೂ ಅಥವಾ ದ್ವೇಷವನ್ನು ಹರಡಿದರೂ, ಸೋದರತ್ವ, ಪರಸ್ಪರ ಪ್ರೀತಿ ಮತ್ತು ಏಕತೆಯಿಂದ ವ್ಯಾಖ್ಯಾನಿಸಲ್ಪಟ್ಟ ದೇಶದ ಆತ್ಮವು ಅಖಂಡವಾಗಿ ಉಳಿಯುತ್ತದೆ. ಅದನ್ನು ಕಿತ್ತುಕೊಳ್ಳಲು ಅವರಿಂದ ಸಾಧ್ಯವಿಲ್ಲ' ಎಂದಿದ್ದಾರೆ.
ಇದಕ್ಕೂ ಮುನ್ನ, ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ವೀರೇನ್ ರಸ್ಕಿನಾ ಅವರು ರಾಷ್ಟ್ರೀಯ ತಂಡದ ಜೆರ್ಸಿ ಬದಲಾಯಿಸಿದ ಹಾಕಿ ಇಂಡಿಯಾದ ನಿರ್ಧಾರವನ್ನು ಪ್ರಶ್ನಿಸಿದ್ದರು. ತಂಡದ ಗುರುತು ಮತ್ತು ಪರಂಪರೆ ಯಾವಾಗಲೂ ನೀಲಿ ಬಣ್ಣದೊಂದಿಗೆ ಬೆಸೆದುಕೊಂಡಿದೆ ಎಂದಿದ್ದರು.

