ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ಕಲಾಪಗಳಿಗೆ ಗೈರಾಗುತ್ತಿರುವುದು ಅವರ 'ಅಪರಾಧ ಪ್ರಜ್ಞೆ'ಯ ಪ್ರತೀಕ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎನ್ನುವ ತಮ್ಮ ಬೇಡಿಕೆಯನ್ನು ಇದೇ ವೇಳೆ ಪುನರುಚ್ಚರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು
ಈ ಬಗ್ಗೆ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಅವರು, ವಿದ್ಯಾರ್ಥಿಗಳಿಗೆ ಲಾಠಿ ಚಾರ್ಜ್ ಮಾಡುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
'ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ವಿದ್ಯಾರ್ಥಿಗಳ ಮೇಲಿನ ಕ್ರೌರ್ಯದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ಸ್ವತಂತ್ರ ಸಮಿತಿ ರಚಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಸಂಸತ್‌ಗೆ ಬಂದು ವಿದ್ಯಾರ್ಥಿಗಳ ಮೇಲೆ ಹಿಂಸೆಯ ಬಗ್ಗೆ ಮಾತನಾಡಲು ಅಮಿತ್ ಶಾಗೆ ಏಕೆ ಭಯ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಪ್ರಶ್ನಿಸಿರುವ ಅವರು ಇದು ಅವರ ಅಪರಾಧ ಪ್ರಜ್ಞೆಯ ಪ್ರತೀಕ ಎಂದು ಕುಟುಕಿದ್ದಾರೆ.
ಪೆಲೆಟ್ ಗನ್ ಬಳಕೆಗೆ ಕಿಡಿ
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪೆಲೆಟ್ ಗನ್ ಉಪಯೋಗಿಸಿದ್ದನ್ನು ಖಂಡಿಸಿದ್ದ ಅವರು, ಗೃಹ ಸಚಿವ ರಾಜೀನಾಮೆ ನೀಡಬೇಕು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಲ್ಲಿ ಸ್ವತಂತ್ರ ತನಿಖಾ ಸಮಿತಿ ರಚಿಸಬೇಕು ಎಂದು ಬುಧವಾರ ಆಗ್ರಹಿಸಿದ್ದರು.
ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಸಲು ಶಾ ಅವರೇ ಆದೇಶಿಸಿದ್ದಾರೆ, ಹೀಗಾಗಿ ಶಾ ತಪ್ಪಿತಸ್ಥರು. ಅವರನ್ನು ಸಚಿವ ಹುದ್ದೆಯಿಂದ ತೆಗೆದುಹಾಕಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ, ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಿದ ವಿಷಯ ಸಚಿವರಿಗೆ ಗೊತ್ತಿಲ್ಲ ಎಂದಾದರೆ ಅವರು ಅಸಮರ್ಥರು ಎಂದರ್ಥ ಎಂದು ಟೀಕಿಸಿದ್ದರು.

