ಕಾಸರಗೋಡು: ನಗರಸಭಾ ವ್ಯಾಪ್ತಿಯ ರಸ್ತೆಗಳು ಶಿಥಿಲಾವಸ್ಥೆಯಲ್ಲಿದ್ದು, ವಾಹನ ಚಾಲಕರ ಪಾಲಿಗೆ ಸಂಕಷ್ಟ ತಂದೊಡ್ಡುತ್ತಿದೆ. ಕಾಸರಗೋಡು ಎಂ.ಜಿ ರಸ್ತೆಯ ಸಿಟಿ ಟವರ್ ಎದುರುಭಾಗದ ರಸ್ತೆ ನಡುವಿನ ಮ್ಯಾನ್‍ಹೋಲ್ ಕುಸಿದಿದ್ದು, ವಾಹನ ಚಾಲಕರಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ.
ಎಂಜಿ ರಸ್ತೆಯ ಅತ್ಯಂತ ವಾಹನದಟ್ಟಣೆಯ ಪ್ರದೇಶದಲ್ಲಿ ಉಂಟಾಗಿರುವ ಶಿಥಿಲಾವಸ್ಥೆ ರಸ್ತೆಯಲ್ಲಿ ವಾಹನಗಳ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿದೆ. ಏಕಮುಖ ಸಂಚಾರದ ಈ ರಸ್ತೆಯಲ್ಲಿನ ಅವ್ಯವಸ್ಥೆಯಿಂದ ದ್ವಿಚಕ್ರವಹನ ಸವಾರರಿಗಂತೂ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಒಂದಷ್ಟುಮೈಮರೆತರೂ, ಇಲ್ಲಿಮ ಹೊಂಡದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಅನತಿ ದೂರದ ಹಳೇ ಪ್ರಸ್‍ಕ್ಲಬ್ ಜಂಕ್ಷನ್‍ಲ್ಲಿ ಟ್ರಾಫಿಕ್ ಸಿಗ್ನಲ್ ಹೊಂದಿರುವುದರಿಂದ, ಕೆಲವೊಮ್ಮೆ ವಾಹನಗಳು ಫರ್ಲಾಂಗು ದೂರದ ವರೆಗೂ ಸಿಗ್ನಲ್ ಬದಲಾವಣೆಗಾಗಿ ಕಾದುನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಟ್ರಾಫಿಕ್ ಪೊಲೀಸರು ಸ್ಥಳದಲ್ಲಿ ಅಪಾಯಸೂಚಕ ಸ್ಟೇಂಡ್‍ಗಳನ್ನಿರಿಸಿರುವುದು ಬಿಟ್ಟರೆ, ಹೊಂಡಕ್ಕೆ ಕಾಂಕ್ರೀಟ್ ಸಲ್ಯಾಬ್ ಅಳವಡಿಸುವ ಗೋಜಿಗೆ ಹೋಗದಿರುವುದು ವಾಹನಚಾಲಕರನ್ನು ಗೊಂದಲಕ್ಕೀಡುಮಾಡುತ್ತಿದೆ.

