HEALTH TIPS

ತೀರ್ಪುಗಳ ವೇಳೆ ಎಐ ರಚಿತ ಪೂರ್ವ ನಿದರ್ಶನ ಬಳಕೆ ಸಲ್ಲ: ಸುಪ್ರೀಂ ಕೋರ್ಟ್‌

 ನವದೆಹಲಿ: ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಸಿದಂತಹ, ಅಸ್ತಿತ್ವದಲ್ಲೇ ಇಲ್ಲದ, ಭ್ರಾಮಕ ತೀರ್ಪುಗಳ ಬಳಕೆಗೆ ಸಂಪೂರ್ಣ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ತೀರ್ಪೋಂದನ್ನು ಗುರುವಾರ ರದ್ದು ಮಾಡಿದೆ. 


ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ಪೂರ್ವ ನಿರ್ದರ್ಶನಗಳ ಉಲ್ಲೇಖ ಮತ್ತು ಬಳಕೆ ವಿರುದ್ಧ ನ್ಯಾಯಾಲಯಗಳು ಶೂನ್ಯ ಸಹಿಷ್ಣುತೆಯನ್ನು ಅಳವಡಿಸಿಕೊಳ್ಳಬೇಕು ಎಂದೂ ಹೇಳಿದೆ.

ನಕಲಿ ಅಥವಾ ಭ್ರಾಮಕ ತೀರ್ಪುಗಳನ್ನು ಉಲ್ಲೇಖಿಸುವುದು ಮತ್ತು ಅವನ್ನು ಪೂರ್ವ ನಿದರ್ಶನಗಳನ್ನಾಗಿ ಬಳಸುವುದು ಎಂದರೆ ಕಾನೂನು ಮತ್ತು ನ್ಯಾಯ ಕ್ಷೇತ್ರದಲ್ಲಿ 'ಮೀಥೈಲ್‌ ಐಸೋಸೈನೇಟ್‌' (ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ) ಬಿಡುಗಡೆ ಆದಂತೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಅಲೋಕ್‌ ಆರಾಧೆ ಅವರನ್ನು ಒಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ.

ಈ 'ಮೀಥೈಲ್‌ ಐಸೋಸೈನೇಟ್‌' ಅದೃಶ್ಯವೂ, ವಿನಾಶಕಾರಿಯೂ ಆಗಿದೆ. ಕಾನೂನು ಮತ್ತು ನ್ಯಾಯಾಂಗದೊಳಗೆ ನುಸುಳುವ ಅದನ್ನು ಗಮನಿಸುವ ಹೊತ್ತಿಗೆ ಇಡೀ ವ್ಯವಸ್ಥೆಯೇ ಕಲುಷಿತಗೊಳ್ಳುತ್ತದೆ. ಅಲ್ಲದೆ ಅದು ನ್ಯಾಯಾಂಗ ನಿರ್ಣಯದ ಜೀವಾಳವನ್ನೇ ನಾಶ ಮಾಡಿಬಿಡುತ್ತದೆ ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

'ಎಸ್ಸೆಲ್‌ ಇನ್ಫ್ರಾಪ್ರಾಜೆಕ್ಟ್ಸ್‌ನ' ದಿವಾಳಿತನ ಕುರಿತು ಎನ್‌ಸಿಎಲ್‌ಟಿ ನೀಡಿದ್ದ ತೀರ್ಪು, ಎಐನಿಂದ ಸೃಷ್ಟಿಸಲಾದ ಅಸ್ತಿತ್ವದಲ್ಲಿಯೇ ಇಲ್ಲದ, ನಕಲಿ ತೀರ್ಪಿನ ಪೂರ್ವ ನಿದರ್ಶನಗಳನ್ನು ಅವಲಂಬಿಸಿದೆ ಎಂಬುದನ್ನು ಕಂಡುಕೊಂಡ ಸುಪ್ರೀಂ ಕೋರ್ಟ್‌ನ ಪೀಠವು ಎನ್‌ಸಿಎಲ್‌ಟಿ ತೀರ್ಪನ್ನು ರದ್ದುಗೊಳಿಸಿತು.

ಸುಪ್ರೀಂ ಉಲ್ಲೇಖಿಸಿದ ಪ್ರಮುಖಾಂಶಗಳು

* ಎಐ ಬಳಸಿ ಪಡೆಯಲಾದ ಮಾಹಿತಿಯನ್ನು ಹಾಗೂ ಪೂರ್ವ ನಿದರ್ಶನಗಳನ್ನು ಸಮಗ್ರವಾಗಿ ಪರಿಶೀಲಿಸದೆ ನ್ಯಾಯಾಲಯಗಳು ಅವನ್ನು ಬಳಸಬಾರದು. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ವಿಧಾನವನ್ನು ಅಳವಡಿಸಿಕೊಳ್ಳಬೇಕು

* ಪರಿಶೀಲನೆ ಇಲ್ಲದೆ ಅಂತಹ ತೀರ್ಪುಗಳನ್ನು ವಕೀಲರೂ ಉಲ್ಲೇಖಿಸಕೂಡದು. ಒಂದು ವೇಳೆ ಹಾಗೆ ಮಾಡಿದರೆ ಅದು ದುರ್ವರ್ತನೆಯೇ ಸರಿ

* ನ್ಯಾಯಾಧೀಶರು ತಮ್ಮ ನಿರ್ಧಾರ ಅಥವಾ ತೀರ್ಪನ್ನು ಬೆಂಬಲಿಸಲು ಈ ರೀತಿಯ ನಕಲಿ ಅಥವಾ ಎಐ ಆಧರಿತ ವಿಷಯಗಳನ್ನು ಪೂರ್ವ ನಿದರ್ಶನಗಳಾಗಿ ಬಳಸಿದರೆ ಅದೂ ಗಂಭೀರ ಲೋಪ

* ನ್ಯಾಯಾಧೀಶರ ಅಂತಹ ನಿರ್ಧಾರಗಳು ಕಾನೂನು ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ಘೋಷಿಸಲು ನಮಗೆ ಹಿಂಜರಿಕೆಯಿಲ್ಲ

* ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಕಲಿ ಅಥವಾ ಭ್ರಾಮಕ ವಿಷಯಗಳ ಸಣ್ಣ ಉಲ್ಲೇಖ ಕಂಡು ಬಂದರೂ ಅದರಿಂದ ತೀರ್ಪಿನ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಅಂತಹ ತೀರ್ಪುಗಳನ್ನು ರದ್ದುಪಡಿಸಬೇಕಾಗುತ್ತದೆ

* ಕೃತಕ ಬುದ್ಧಿಮತ್ತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಈ ತೀರ್ಪು ಪರಿಣಾಮ ಬೀರುವುದಿಲ್ಲ

* ವಕೀಲರ ಸಂಘ ಮತ್ತು ನ್ಯಾಯಾಲಯಗಳು ಅಂತಹ ವಿಷಯಗಳ ಉಲ್ಲೇಖ ಅಥವಾ ಅವಲಂಬನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರಬೇಕು. ಈ ಬಗ್ಗೆ ಘೋಷಣೆಯಷ್ಟೇ ಸಾಲದು ಹೊಣೆಗಾರಿಕೆಯೂ ಇರಬೇಕು

* ಈ ಕುರಿತ ಜವಾಬ್ದಾರಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಸಂಘ ಸಮಿತಿಯೊಂದನ್ನು ರಚಿಸಬೇಕು. ಈ ವಿಷಯವನ್ನು ಸಂಘ ಗಂಭೀರವಾಗಿ ಪರಿಗಣಿಸಬೇಕು. ಎಐ ರಚಿತ ನಕಲಿ ತೀರ್ಪುಗಳ ಉಲ್ಲೇಖ ತಡೆಗಟ್ಟಲು ಮಾರ್ಗಸೂಚಿ ತರಬೇಕು. ಆ ನಿಯಮಗಳ ಉಲ್ಲಂಘಿಸಿದವರ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಕ್ರಮವನ್ನೂ ಸಮಿತಿ ಸೂಚಿಸಬೇಕು

* ತೀರ್ಪಿನ ನೆರವಿಗಾಗಿ ಎಐ ತಂತ್ರಜ್ಞಾನ ಅಳವಡಿಕೆ ಮಹತ್ವದ್ದಾಗಿದ್ದರೂ ಅದರ ಪ್ರತಿ ಹಂತದಲ್ಲೂ ಮನುಷ್ಯನ ಒಳಗೊಳ್ಳುವಿಕೆ ಮತ್ತು ನಿಯಂತ್ರಣಕ್ಕೆ ಒತ್ತು ನೀಡಬೇಕು

ನಕಲಿ ಉಲ್ಲೇಖಗಳನ್ನು ಗುರುತಿಸಿದ 'ಸುಪ್ರೀಂ'

ಪೂಜಾ ರಮೇಶ್‌ ಸಿಂಗ್‌ ಜಮ್ಮು-ಕಾಶ್ಮೀರ ಬ್ಯಾಂಕ್‌ ಲಿಮಿಟೆಡ್‌ ಹಾಗೂ ಎಸ್ಸೆಲ್‌ ಇನ್ಫ್ರಾಪ್ರಾಜೆಕ್ಟ್‌ ಲಿಮಿಟೆಡ್‌ ನಡುವೆ ದಿವಾಳಿತನಕ್ಕೆ ಸಂಬಂಧಿಸಿ ವಿವಾದ ಉಂಟಾಗಿತ್ತು. ದಿವಾಳಿತನದ ಅರ್ಜಿಯನ್ನು ಒಪ್ಪಿಕೊಂಡಿದ್ದ ಮುಂಬೈನ ಎನ್‌ಸಿಎಲ್‌ಟಿ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಎನ್‌ಸಿಎಲ್‌ಟಿ ತೀರ್ಪಿನಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಲು ಉಲ್ಲೇಖಿಸಿದ ಹಲವು ಪೂರ್ವ ನಿದರ್ಶನಗಳು ಅಸ್ತಿತ್ವದಲ್ಲಿಯೇ ಇಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಪತ್ತೆ ಮಾಡಿತು. ತೀರ್ಪಿನಲ್ಲಿ ನಿಜವಾದ ಉಲ್ಲೇಖಗಳಿಗೆ ಬದಲಾಗಿ ಕಲ್ಪಿತ ಪ್ರಕರಣದ ಹೆಸರುಗಳು ಮತ್ತು ಕಂಡಿಕೆಗಳು ಸೇರ್ಪಡೆಯಾಗಿರುವುದನ್ನು ಪೀಠ ಗುರುತಿಸಿತು. ಅಲ್ಲದೆ ತೀರ್ಪಿನಲ್ಲಿ ಐಸಿಐಸಿಐ ಬ್ಯಾಂಕ್‌ ಲಿಮಿಟೆಡ್‌ ವರ್ಸಸ್‌ ಅರ್ಬನ್‌ ಇನ್ಫ್ರಾಸ್ಟ್ರಕ್ಟರ್‌ ರಿಯಲ್‌ ಎಸ್ಟೇಟ್‌ ಲಿಮಿಟೆಡ್‌ (2019) 16 ಎಸ್‌ಸಿಸಿ 528 ಮತ್ತು ಸರಬ್ಜಿತ್‌ ಸಿಂಗ್‌ ವರ್ಸಸ್‌ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ (2022) 7 ಎಸ್‌ಸಿಸಿ 464 ಅನ್ನು ಉಲ್ಲೇಖಿಸಲಾಗಿದೆ. ಈ ಎರಡೂ ಅಸ್ತಿತ್ವದಲ್ಲಿಯೇ ಇಲ್ಲದ ಉಲ್ಲೇಖಗಳಾಗಿವೆ ಎಂಬುದನ್ನು ಪೀಠ ಗುರುತಿಸಿದೆ. ಪ್ರತಿವಾದಿಯಾದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ತಮ್ಮ ವಕೀಲರು ಈ ಉಲ್ಲೇಖಗಳನ್ನು ಪ್ರಸ್ತಾಪಿಸಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದೆ. ಇದೇ ವೇಳೆ ಎನ್‌ಸಿಎಲ್‌ಟಿ ತನ್ನ ಸ್ವಂತ ಸಂಶೋಧನೆ ಮೂಲಕ ಈ ಅಂಶಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದೆ. ಆದರೆ ಈ ದೋಷದಿಂದ ಕಾನೂನಿನ ನಿಯಮಕ್ಕೆ ಹಾನಿಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries