ಉಪ್ಪಳ: ಕಯ್ಯಾರು ಡೋನ್ ಬೋಸ್ಕೋ ಎ.ಯು.ಪಿ. ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಹಾಗೂ ಎಲ್.ಎಸ್.ಎಸ್ ಮತ್ತು ನವೋದಯ ಸ್ಪರ್ಧಾ ಪರೀಕ್ಷೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ರಶ್ಮಿ ಚೇವಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾತೆಯರ ಸಂಘದ ಅಧ್ಯಕ್ಷೆ ಭವ್ಯಾ ಬಾನೋಟ್, ಉಪಾಧ್ಯಕ್ಷ ವೇಣು ಗೋಪಾಲ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೋಡ್ರಿಗಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೇಕಲ ಸರ್ಕಾರಿ ಫಿಶರೀಸ್ ಶಾಲೆಯ ನಿವೃತ್ತ ಪ್ರಾಂಶುಪಾಲ ಅರವಿಂದ ಕೆ. ಅವರು ಮಾತನಾಡಿ, ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಬೇಕು. ಮಗು ಏನಾಗಬೇಕು ಮತ್ತು ಹೇಗಾಗಬೇಕು ಎಂಬ ಸ್ಪಷ್ಟ ಅರಿವು ನಮಗೆ ಇರಬೇಕು. ಜೀವನದಲ್ಲಿ ಸರಳತೆ ಮತ್ತು ಸಜ್ಜನಿಕೆಯ ವ್ಯಕ್ತಿತ್ವದ ಗುಣಗಳನ್ನು ಅಳವಡಿಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದು, ಅವರ ವ್ಯವಹಾರಗಳನ್ನು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 9 ವಿದ್ಯಾರ್ಥಿಗಳನ್ನು ಹಾಗೂ ನವೋದಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 6 ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳು ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕ ಸಿರಿಲ್ ಕ್ರಾಸ್ತಾ ಅವರು ಅಭಿನಂದನಾ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿ ಶಾಲಿನಿ ಶಾಲಾ ವರದಿ ಸಭೆಯ ಮುಂದಿಟ್ಟರು. ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಪ್ರವೀಣ್ ಪ್ರಕಾಶ್ ಕ್ರಾಸ್ತಾ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವೇಣುಗೋಪಾಲ್ ಹಾಗೂ ಮಾತೆಯರ ಸಂಘದ ಅಧ್ಯಕ್ಷರಾಗಿ ಭವ್ಯಾ ಬಾನೋಟ್ ಮರು ಆಯ್ಕೆಯಾದರು. ಶಿಕ್ಷಕಿ ಸಿಸ್ಟರ್ ಸೆವ್ರಿನ್ ಡಿ ಕುನ್ಹಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಝೀನಾ ಡಿಸೋಜ ಸ್ವಾಗತಿಸಿ, ಪ್ರಸೀದಾ ಟೀಚರ್ ವಂದಿಸಿದರು.

.jpg)
.jpg)
