ಕಾಸರಗೋಡು: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಜನರಿಗೆ ತಲುಪಿಸುವುದರ ಜತೆಗೆ ಮತದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕಾಗಿ ಶ್ರಮಿಸಲು ಸಾಧ್ಯವಾಗಿರುವುದರಿಂದ ಕೇರಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ ಗೆಲುವಿಗೆ ಹಾದಿಮಾಡಿಕೊಟ್ಟಿರುವುದಾಗಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ತಿಳಿಸಿದ್ದಾರೆ.
ಅವರು ಬಿಜೆಪಿ ಕುಂಬಳೆ ಮಂಡಲ ಸಮಿತಿ ವತಿಯಿಂದ ಪೆರ್ಲ ಶ್ರೀಶಂಕರಸದನದಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ದ್ವಿದಿನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಎನ್‍ಡಿಎ ಸರ್ಕಾರದ ಉತ್ತಮ ಆಡಳಿತ ಜಗತ್ತಿನ ದೇಶಗಳಿಗೆ ಮಾದರಿಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಭಾರತ ಸಾಧಿಸಿರುವ ಪ್ರಗತಿ ಮುಂದುವರಿದ ದೇಶಗಳನ್ನೂ ಬೆರಗುಗೊಳಿಸಿದೆ. ದೇಶದ ಒಟ್ಟುಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಮಾಜದ ಕಲ್ಯಾಣವನ್ನು ಖಾತ್ರಿಪಡಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಕ್ಷದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.
ಬಿಜೆಪಿ ಕುಂಬಳೆ ಮಂಡಲದ ಉಪಾಧ್ಯಕ್ಷ ವಿಕ್ರಮ್ ಪೈ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ವಕೀಲ ವಿ. ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಕೋಯಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ್ ಯಾದವ್, ರಾಜ್ಯ ಕೌನ್ಸಿಲ್ ಸದಸ್ಯ ಜಯಂತ ಪಾಟಾಳಿ, ಎಸ್‍ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾರಾಯಣ ನಾಯ್ಕ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್., ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ. ಮತ್ತು ರೂಪವಾಣಿ ಭಟ್ ್ಸುಪಸ್ಥಿತರಿದ್ದರು.
ಎರಡು ದಿವಸಗಳ ಕಲ ನಡೆದ ಪ್ರಶಿಕ್ಷಣ ಶಿಬಿರದಲ್ಲಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂಹೆಚ್ಚುಮಂದಿ ಪ್ರತಿನಿಧೀಗಳು ಭಾಗವಹಿಸಿದ್ದರು.



