ಪಾಟ್ನಾ: ಬಿಹಾರದ ತ್ರೈಮಾಸಿಕ ಶಾಲಾ ಪರೀಕ್ಷೆಗಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಬಕ್ಸರ್‌ನ ಶಿಕ್ಷಣ ಕೇಂದ್ರವೊಂದರಲ್ಲಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ಕಟ್ಟುಗಳು ಮಳೆ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಇದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪರೀಕ್ಷಾ ಸಾಮಾಗ್ರಿಗಳನ್ನು ನಿರ್ವಹಿಸುವ ವಿಧಾನದ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಈ ಪತ್ರಿಕೆಗಳನ್ನು ಬಿಹಾರ ಮಂಡಳಿಯು 9, 10 ಮತ್ತು 12ನೇ ತರಗತಿಗಳ ತ್ರೈಮಾಸಿಕ ಪರೀಕ್ಷೆಗಳಿಗಾಗಿ ಕಳುಹಿಸಿತ್ತು. ಪರೀಕ್ಷಾ ಸಾಮಗ್ರಿಗಳು ಬಕ್ಸರ್‌ನ ಬುನಿಯಾದಿ ಶಾಲೆಗೆ ತಲುಪಿವೆ ಎಂದು ಮುಖ್ಯೋಪಾಧ್ಯಾಯರಿಗೆ ತಿಳಿಸಲಾಗಿತ್ತು. ಅವುಗಳನ್ನು ಬಂದು ಪಡೆದುಕೊಳ್ಳುವಂತೆ ಕೋರಲಾಗಿತ್ತು.
ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಉತ್ತರ ಪತ್ರಿಕೆಗಳು ಮತ್ತು ಪ್ರಶ್ನೆ ಪತ್ರಿಕೆಗಳ ಕಟ್ಟುಗಳು ನೀರಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅನೇಕರು ಅಧಿಕಾರಿಗಳ ನಿರ್ಲಕ್ಷ್ಯವನ್ನು ದೂಷಿಸಿದ್ದಾರೆ. ಈ ದೃಶ್ಯಗಳು ವೇಗವಾಗಿ ವೈರಲ್ ಆಗಿದ್ದು, ಇಷ್ಟು ಸೂಕ್ಷ್ಮವಾದ ಪರೀಕ್ಷಾ ಸಾಮಾಗ್ರಿಗಳನ್ನು ಮಳೆಗೆ ಸಿಲುಕುವಂತೆ ಹೇಗೆ ಬಿಡಲಾಯಿತು ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.
ಆದರೆ, ಪರೀಕ್ಷಾ ಸಾಮಗ್ರಿಗಳಿಗೆ ಹಾನಿಯಾಗಿದೆ ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಅವರ ಪ್ರಕಾರ ಹಠಾತ್ ಮಳೆಯ ನಂತರ ಕಟ್ಟುಗಳು ನೀರಿನಲ್ಲಿ ಕಂಡು ಬಂದಿದ್ದರೂ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳು ಸುರಕ್ಷಿತವಾಗಿದ್ದು, ಪರೀಕ್ಷೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಆದರೂ ಈ ಘಟನೆಯು ರಹಸ್ಯ ಪರೀಕ್ಷಾ ಸಾಮಗ್ರಿಗಳ ಶೇಖರಣೆ, ನಿರ್ವಹಣೆ ಮತ್ತು ವಿತರಣೆಯ ಬಗ್ಗೆ ಕಳವಳವನ್ನು ಮತ್ತೊಮ್ಮೆ ಹುಟ್ಟು ಹಾಕಿದೆ. ಭವಿಷ್ಯದಲ್ಲಿ ಇಂತಹ ಮುಜುಗರದ ಪರಿಸ್ಥಿತಿಗಳನ್ನು ತಪ್ಪಿಸಲು ಉತ್ತಮ ಸುರಕ್ಷಾ ಮಾರ್ಗಗಳನ್ನು ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.

