ಭಾರತದಲ್ಲಿ ಎಥನಾಲ್ ಮಿಶ್ರಿತ ಇಂಧನ ಬಳಕೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಈ ಯೋಜನೆಯ ಜಾರಿ ಕ್ರಮಗಳ ಬಗ್ಗೆ ಟೀಕೆಗಳೂ ಕೇಳಿಬರುತ್ತಿವೆ. ಸದ್ಯ ದೇಶದಲ್ಲಿ ಇ20 (ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಲ್ಲಿದೆ. ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರು ಈ ಹೊಸ ಇಂಧನ ಬಳಸಲು ಆರಂಭಿಸಿದಾಗಿನಿಂದ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಇಂಜಿನ್ ಬೇಗನೆ ಸವೆದುಹೋಗುತ್ತಿದೆ ಎಂದು ದೂರಿದ್ದಾರೆ.
ಇಂತಹ ಆತಂಕಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ವಿವಿಧ ಸಮೀಕ್ಷೆಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿದ್ದರೂ, ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದು, ಇಂಧನ ವೆಚ್ಚವನ್ನು ತಗ್ಗಿಸುವುದು ಮತ್ತು ವಿದೇಶಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವುದೇ ಸರ್ಕಾರದ ಈ ಎಥನಾಲ್ ಮಿಶ್ರಣ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣದ ನಿಯಮಗಳನ್ನು ಈಗಾಗಲೇ ಅಧಿಸೂಚಿಸಲಾಗಿದ್ದು, ಇ20 ನಂತರದ ಮುಂದಿನ ಹಂತವೇನು ಎಂಬ ಪ್ರಶ್ನೆ ಮೂಡಿದೆ. ಭಾರತವು ಇ25 ಇಂಧನ ಬಳಕೆಗೆ ಮುಂದಾದರೆ, ಸದ್ಯ ಚಾಲ್ತಿಯಲ್ಲಿರುವ ಇ10 ಮತ್ತು ಇ20 ಇಂಧನಕ್ಕೆ ಹೊಂದುವ ವಾಹನಗಳು ಅದನ್ನು ಸುರಕ್ಷಿತವಾಗಿ ಬಳಸಲು ಸಾಧ್ಯವೇ? ಇದು ಮೈಲೇಜ್, ವಾಹನದ ಸಾಮರ್ಥ್ಯ, ಇಂಜಿನ್ ಬಾಳಿಕೆ ಅಥವಾ ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರಬಹುದೇ? ನಾವು ಇ25 ಇಂಧನ ಬಳಕೆಗೆ ಮುನ್ನಡೆದರೆ ಎದುರಾಗಬಹುದಾದ ಸಂಭಾವ್ಯ ಪರಿಣಾಮಗಳ ವಿವರಗಳು ಇಲ್ಲಿವೆ.
ಭಾರತವು ಇ20 ಪೆಟ್ರೋಲ್ ಬಳಕೆಗೆ ಬದಲಾದಾಗ ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರಿಂದ ಮೈಲೇಜ್ ಕೊರತೆ ಮತ್ತು ಹೆಚ್ಚಿದ ನಿರ್ವಹಣಾ ವೆಚ್ಚದ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈಗ ಎಥನಾಲ್ ಪ್ರಮಾಣವನ್ನು ಶೇಕಡಾ 25ಕ್ಕೆ ಹೆಚ್ಚಿಸಿದರೆ, ಅದರ ಪರಿಣಾಮವು ಮುಖ್ಯವಾಗಿ ಆ ವಾಹನವು ಯಾವಾಗ ತಯಾರಾಗಿದೆ ಮತ್ತು ಅದರಲ್ಲಿ ಎಷ್ಟು ಪ್ರಮಾಣದ ಎಥನಾಲ್ ಬಳಸಲು ತಂತ್ರಜ್ಞಾನ ರೂಪಿಸಲಾಗಿದೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ.
ಇ10 ಇಂಧನಕ್ಕೆ ಹೊಂದುವ ಕಾರಿಗೆ ಇ25 ಪೆಟ್ರೋಲ್ ಹಾಕಿದರೆ ಏನಾಗುತ್ತದೆ?
ಕೇವಲ ಇ10 ಪೆಟ್ರೋಲ್‌ಗೆ ಮಾತ್ರ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ವಾಹನಗಳಿಗೆ ನಿರಂತರವಾಗಿ ಇ25 ಇಂಧನವನ್ನು ಬಳಸಿದರೆ, ಅದು ಇ10ರಿಂದ ಇ20ಗೆ ಬದಲಾದಾಗ ಎದುರಾದ ಸಮಸ್ಯೆಗಳಿಗಿಂತಲೂ ಹೆಚ್ಚಿನ ತೊಂದರೆಗಳನ್ನು ತಂದೊಡ್ಡಬಹುದು. ಈ ವಾಹನಗಳನ್ನು ಗರಿಷ್ಠ ಶೇಕಡಾ 10ರಷ್ಟು ಎಥನಾಲ್ ಮಿಶ್ರಿತ ಇಂಧನ ಬಳಸಲು ಸಿದ್ಧಪಡಿಸಲಾಗಿರುತ್ತದೆ. ಹಾಗಾಗಿ, ಶೇಕಡಾ 25ರಷ್ಟು ಎಥನಾಲ್ ಇರುವ ಇಂಧನವನ್ನು ಇವುಗಳಲ್ಲಿ ಬಳಸುವುದರಿಂದ ಇಂತಹ ಇಂಧನಕ್ಕೆ ಹೊಂದಿಕೆಯಾಗದ ಇಂಜಿನ್ ಭಾಗಗಳು ಅತ್ಯಂತ ವೇಗವಾಗಿ ಸವೆಯಲು ಮತ್ತು ಹಾಳಾಗಲು ಕಾರಣವಾಗಬಹುದು.
ಈ ಆತಂಕಗಳು ಕೇವಲ ಊಹಾಪೋಹಗಳಲ್ಲ. ಇ20 ಇಂಧನ ಜಾರಿಗೆ ಬಂದಾಗ, ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರು ಮೈಲೇಜ್ ನಲ್ಲಿ ಗಣನೀಯ ಕುಸಿತ ಮತ್ತು ವಾಹನ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದನ್ನು ಖುದ್ದು ಅನುಭವಿಸಿದ್ದರು.
ನಾಗರಿಕ ಸಂಪರ್ಕ ವೇದಿಕೆಯಾದ 'ಲೋಕಲ್‌ಸರ್ಕಲ್ಸ್' ದೇಶಾದ್ಯಂತ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 2023ಕ್ಕಿಂತ ಮುಂಚೆ ತಯಾರಾದ ಪೆಟ್ರೋಲ್ ವಾಹನಗಳ ಮಾಲೀಕರಲ್ಲಿ ಶೇಕಡಾ 66ರಷ್ಟು ಜನ, ಇ20 ಪೆಟ್ರೋಲ್ ಬಳಕೆ ವ್ಯಾಪಕವಾದ ನಂತರ ತಮ್ಮ ವಾಹನದ ಮೈಲೇಜ್ ಶೇಕಡಾ 10ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇಕಡಾ 45ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ದೂರುಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ 22,000ಕ್ಕೂ ಹೆಚ್ಚು ಜನರಲ್ಲಿ, ಶೇಕಡಾ 23ರಷ್ಟು ಮಂದಿ ತಮ್ಮ ವಾಹನದ ಮೈಲೇಜ್ ಶೇಕಡಾ 20ಕ್ಕಿಂತ ಹೆಚ್ಚು ಕುಸಿದಿದೆ ಎಂದಿದ್ದಾರೆ. ಇನ್ನು ಶೇಕಡಾ 23ರಷ್ಟು ಜನ ಶೇಕಡಾ 15ರಿಂದ 20ರಷ್ಟು ಮತ್ತು ಶೇಕಡಾ 20ರಷ್ಟು ಜನ ಶೇಕಡಾ 10ರಿಂದ 15ರಷ್ಟು ಮೈಲೇಜ್ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ, ಸುಮಾರು 22,700 ಜನರಲ್ಲಿ ಶೇಕಡಾ 24ರಷ್ಟು ಮಂದಿ ಇಂಜಿನ್ ಭಾಗಗಳು ತೀವ್ರವಾಗಿ ಸವೆಯುತ್ತಿವೆ ಎಂದು ದೂರಿದ್ದರೆ, ಶೇಕಡಾ 21ರಷ್ಟು ಜನ ಸಾಧಾರಣ ಸವೆತ ಕಂಡುಬಂದಿದೆ ಎಂದಿದ್ದಾರೆ. ಹಲವರು ತಮ್ಮ ವಾಹನಗಳ ಫ್ಯುಯೆಲ್ ಪಂಪ್, ಇಂಜೆಕ್ಟರ್‌ಗಳು, ಕಾರ್ಬ್ಯುರೇಟರ್‌ಗಳು, ಇಂಧನದ ಪೈಪ್‌ಗಳು ಮತ್ತು ಇಂಧನ ಟ್ಯಾಂಕ್ ಗಳಂತಹ ಭಾಗಗಳನ್ನು ಬದಲಾಯಿಸಬೇಕಾಗಿ ಬಂದಿದೆ ಅಥವಾ ರಿಪೇರಿ ಮಾಡಿಸಬೇಕಾಗಿ ಬಂದಿದೆ ಎಂದು ತಿಳಿಸಿದ್ದಾರೆ.
ಈ ಸಮೀಕ್ಷೆಯು ಯಾವುದೇ ಪ್ರಯೋಗಾಲಯದ ತಾಂತ್ರಿಕ ಪರೀಕ್ಷೆಯ ವರದಿಯಲ್ಲದಿದ್ದರೂ, ವಾಹನ ಮಾಲೀಕರ ನೇರ ಅನುಭವವನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣಕ್ಕೆ ಹೊಂದಿಕೊಳ್ಳದ ವಾಹನಗಳಲ್ಲಿ ಇದನ್ನು ಬಳಸಿದಾಗ ಎದುರಾಗುವ ಗಂಭೀರ ಆತಂಕಗಳನ್ನು ಇದು ಸ್ಪಷ್ಟಪಡಿಸುತ್ತದೆ.
ಒಂದು ವೇಳೆ ಎಥನಾಲ್ ಪ್ರಮಾಣವನ್ನು ಇ25ಗೆ ಹೆಚ್ಚಿಸಿದರೆ, ಕೇವಲ ಇ10 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳನ್ನು ದೀರ್ಘಕಾಲ ಬಳಸುವುದರಿಂದ ಇನ್ನು ಹೆಚ್ಚಿನ ತೊಂದರೆಗಳು ಎದುರಾಗಬಹುದು:
ಮೈಲೇಜ್ ಕೊರತೆ: ಪೆಟ್ರೋಲ್‌ಗೆ ಹೋಲಿಸಿದರೆ ಎಥನಾಲ್‌ನಲ್ಲಿ ಶಕ್ತಿ ಸಾಂದ್ರತೆ ಕಡಿಮೆಯಿರುವುದರಿಂದ ಮೈಲೇಜ್ ಮತ್ತಷ್ಟು ಕುಸಿಯುತ್ತದೆ.
ರಬ್ಬರ್ ಭಾಗಗಳ ಹಾನಿ: ಇಂಜಿನ್‌ನಲ್ಲಿರುವ ರಬ್ಬರ್ ಸೀಲ್‌ಗಳು, ಹೋಸ್ ಪೈಪ್‌ಗಳು ಮತ್ತು ಗ್ಯಾಸ್ಕೆಟ್‌ಗಳು ಬೇಗನೆ ಹಾಳಾಗುತ್ತವೆ.
ತುಕ್ಕು ಹಿಡಿಯುವುದು: ಇಂಧನ ಟ್ಯಾಂಕ್, ಇಂಜೆಕ್ಟರ್‌ಗಳು ಮತ್ತು ಇಂಧನ ಪೈಪ್‌ಗಳಲ್ಲಿ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ.
ತೇವಾಂಶ ಹೀರುವಿಕೆ: ಎಥನಾಲ್ ಸ್ವಭಾವತಃ ತೇವಾಂಶವನ್ನು ತನ್ನತ್ತ ಸೆಳೆಯುವುದರಿಂದ ಇಂಧನದಲ್ಲಿ ನೀರಿನ ಅಂಶ ಸೇರಿಕೊಳ್ಳುತ್ತದೆ.
ಇಂಜಿನ್ ಸಾಮರ್ಥ್ಯದ ಮೇಲೆ ಪರಿಣಾಮ: ಇಂಧನ ದಹನ ಪ್ರಕ್ರಿಯೆಯ ಏರುಪೇರಿನಿಂದಾಗಿ ವಾಹನ ಚಾಲನೆ ಸುಗಮವಾಗಿರದೆ ಇಂಜಿನ್‌ನಲ್ಲಿ ಜರ್ಕ್‌ಗಳು ಕಾಣಿಸಿಕೊಳ್ಳಬಹುದು.
ಇಂಜಿನ್ ಭಾಗಗಳ ಮೇಲಿನ ಒತ್ತಡ: ಕಾಲಾನಂತರದಲ್ಲಿ ಫ್ಯುಯೆಲ್ ಪಂಪ್ ಮತ್ತು ಇಂಜೆಕ್ಟರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
ಕಾರ್ಬ್ಯುರೇಟರ್ ಆಧಾರಿತ ಇಂಧನ ವ್ಯವಸ್ಥೆ ಹೊಂದಿರುವ ಹಳೆಯ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಇದರಿಂದ ಹೆಚ್ಚಿನ ಅಪಾಯವಿದೆ. ಹೆಚ್ಚಿನ ಪ್ರಮಾಣದ ಎಥನಾಲ್ ಅನ್ನು ಸುರಕ್ಷಿತವಾಗಿ ನಿರ್ವಹಿಸಲು ಅಗತ್ಯವಿರುವ ಇಂಜಿನ್ ತಂತ್ರಜ್ಞಾನವಾಗಲಿ, ಅದಕ್ಕೆ ಸೂಕ್ತವಾದ ಬಿಡಿಭಾಗಗಳಾಗಲಿ ಇವುಗಳಲ್ಲಿ ಇರುವುದಿಲ್ಲ.
ಇ20 ಇಂಧನಕ್ಕೆ ಹೊಂದುವ ಕಾರುಗಳದ್ದೇನು ಕತೆ?
ಇ20 ಇಂಧನಕ್ಕೆ ಪ್ರಮಾಣೀಕರಿಸಲ್ಪಟ್ಟ ವಾಹನಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಅವುಗಳು ತಾನಾಗಿಯೇ ಇ25 ಇಂಧನಕ್ಕೂ ಹೊಂದಿಕೊಳ್ಳುತ್ತವೆ ಎಂದು ಹೇಳಲಾಗುವುದಿಲ್ಲ.
ವಾಹನ ತಯಾರಕರು ಇ20 ಮಾದರಿಯ ವಾಹನಗಳನ್ನು ಸಿದ್ಧಪಡಿಸುವಾಗ ಎಥನಾಲ್ ನಿರೋಧಕ ಬಿಡಿಭಾಗಗಳು, ನವೀಕರಿಸಿದ ಇಂಧನ ವ್ಯವಸ್ಥೆ ಮತ್ತು ಶೇಕಡಾ 20ರಷ್ಟು ಎಥನಾಲ್ ಅನ್ನು ಸುರಕ್ಷಿತವಾಗಿ ನಿರ್ವಹಿಸಬಲ್ಲ ಇಂಜಿನ್ ತಂತ್ರಜ್ಞಾನವನ್ನು ಬಳಸಿರುತ್ತಾರೆ. ಆದರೆ, ಎಥನಾಲ್ ಪ್ರಮಾಣವನ್ನು ಶೇಕಡಾ 25ಕ್ಕೆ ಹೆಚ್ಚಿಸಬೇಕಾದರೆ ತಯಾರಕರು ಇಂಜಿನ್‌ನ ಬಾಳಿಕೆ, ಮಾಲಿನ್ಯ ನಿಯಂತ್ರಣದ ಅನುಸರಣೆ ಮತ್ತು ಇಂಜಿನ್ ಮ್ಯಾಪಿಂಗ್ ಅನ್ನು ಮತ್ತೊಮ್ಮೆ ಪರೀಕ್ಷಿಸಿ ದೃಢೀಕರಿಸಬೇಕಾಗುತ್ತದೆ.
ಹೆಚ್ಚಿನ ಇ20 ವಾಹನಗಳಿಗೆ ಅಪರೂಪಕ್ಕೊಮ್ಮೆ ಇ25 ಪೆಟ್ರೋಲ್ ಹಾಕುವುದರಿಂದ ತಕ್ಷಣವೇ ಯಾವುದೇ ತಾಂತ್ರಿಕ ಹಾನಿಯಾಗುವ ಸಾಧ್ಯತೆಯಿಲ್ಲ. ಆದರೆ, ವಾಹನ ತಯಾರಕರ ಅನುಮತಿಯಿಲ್ಲದೆ ನಿರಂತರವಾಗಿ ಇದನ್ನು ಬಳಸುವುದರಿಂದ ಮೈಲೇಜ್‌ನಲ್ಲಿ ಸ್ವಲ್ಪ ಕುಸಿತ ಹಾಗೂ ಇ25 ಇಂಧನಕ್ಕೆ ಪ್ರಮಾಣೀಕರಿಸದಿರುವ ಇಂಜಿನ್ ಭಾಗಗಳ ದೀರ್ಘಕಾಲದ ಬಾಳಿಕೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಇ25 ಕಡ್ಡಾಯವಾಗಲಿದೆಯೇ?
ಭವಿಷ್ಯದಲ್ಲಿ ಇ25 ಭಾರತದ ಪ್ರಮಾಣಿತ ಪೆಟ್ರೋಲ್ ಮಿಶ್ರಣವಾಗಲಿದೆಯೇ ಮತ್ತು ಅದರ ಜೊತೆಯಲ್ಲೇ ಇ20 ಇಂಧನವೂ ಲಭ್ಯವಿರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಇಂದಿಗೂ ಕೆಲವು ಇಂಧನ ಕೇಂದ್ರಗಳಲ್ಲಿ ಕಡಿಮೆ ಅಥವಾ ಎಥನಾಲ್ ರಹಿತ 100 ಆಕ್ಟೇನ್ ಪೆಟ್ರೋಲ್ ಲಭ್ಯವಿದೆ. ಆದರೆ, ಇದು ಸಾಮಾನ್ಯ ಇ20 ಪೆಟ್ರೋಲ್‌ಗಿಂತ ಭಾರೀ ದುಬಾರಿಯಾಗಿರುವುದರಿಂದ ಹೆಚ್ಚಿನ ವಾಹನ ಸವಾರರಿಗೆ ಇದು ಪ್ರಾಯೋಗಿಕ ಆಯ್ಕೆಯಾಗಿ ಉಳಿದಿಲ್ಲ.
ಇ25 ಇಂಧನದ ಕಡೆಗೆ ಕೈಗೊಳ್ಳುವ ಯಾವುದೇ ನಿರ್ಧಾರವು ಹಂತ ಹಂತವಾಗಿರಲಿದ್ದು, ಸರ್ಕಾರವು ಈ ಇಂಧನವನ್ನು ವ್ಯಾಪಕವಾಗಿ ಜಾರಿಗೆ ತರುವ ಮುನ್ನ ವಾಹನಗಳ ಸಿದ್ಧತೆ, ಇಂಧನ ಮೂಲಸೌಕರ್ಯ ಮತ್ತು ಆಟೋಮೊಬೈಲ್ ಉದ್ಯಮದ ಸನ್ನದ್ಧತೆಯನ್ನು ಗಣನೆಗೆ ತೆಗೆದುಕೊಳ್ಳಲಿದೆ. ಒಂದು ವೇಳೆ ಇದಕ್ಕೆ ಅನುಮೋದನೆ ಸಿಕ್ಕರೆ, ಈ ಬದಲಾವಣೆಯು ಈ ಹಿಂದೆ ಇ20 ಜಾರಿಯಾದ ಮಾದರಿಯಲ್ಲೇ ಹಂತ ಹಂತವಾಗಿ ನಡೆಯುವ ಸಾಧ್ಯತೆಯಿದೆ. ಇದು ವಾಹನ ತಯಾರಕರಿಗೆ ಇ25ಗೆ ಹೊಂದುವ ವಾಹನಗಳನ್ನು ಅಭಿವೃದ್ಧಿಪಡಿಸಲು ಸಮಯಾವಕಾಶ ನೀಡುತ್ತದೆ ಹಾಗೂ ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರಿಗೂ ಈ ಬದಲಾವಣೆಗೆ ಹೊಂದಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

