ದುಬೈ: ಯೆಮೆನ್‌ನ ಹೂಥಿ ಬಂಡುಕೋರರು ನಡೆಸಿದ ಸರಣಿ ದಾಳಿಯಲ್ಲಿ 4 ವರ್ಷದ ಮಗು ಸೇರಿ 10ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ಸೇನೆ ತಿಳಿಸಿದೆ.
ಯೆಮೆನ್ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಸೌದಿ ಪ್ರದೇಶವಾದ ನಜ್ರಾನ್‌ನಲ್ಲಿ ಈ ದಾಳಿ ನಡೆದಿದೆ.
'ಹೂಥಿ ಬಂಡುಕೋರರು ನಡೆಸಿದ ಶೆಲ್ ದಾಳಿಯಿಂದ ವಿವಿಧ ದೇಶಗಳ ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಸೌದಿ ಅರೇಬಿಯಾ ಏಳು ನಾಗರಿಕರು, ಒಬ್ಬ ಯೆಮೆನ್, ಇಬ್ಬರು ಈಜಿಪ್ಟ್ ಮತ್ತು ಒಬ್ಬ ಪಾಕಿಸ್ತಾನದ ಪ್ರಜೆಯೂ ಸೇರಿದ್ದಾರೆ. ಈ ದಾಳಿಯು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆಯಾಗಿದ್ದು, ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ' ಎಂದು ಸೌದಿ ಅರೇಬಿಯಾದ ಸೇನಾ ವಕ್ತಾರ ತುರ್ಕಿ ಅಲ್-ಮಲ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೆಮೆನ್‌ನ ಮಾರಿಬ್ ಮತ್ತು ಹದ್ರಮೌತ್ ಪ್ರಾಂತ್ಯಗಳಲ್ಲಿರುವ ಸೇನಾ ಶಿಬಿರಗಳ ಮೇಲೂ ಹೂಥಿಗಳು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದು, ಕನಿಷ್ಠ 30 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

