ನವದೆಹಲಿ: ಜಾರ್ಖಂಡ್ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಸ್ವತಂತ್ರ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ (ಆಗಸ್ಟ್ 24ರಂದು) ನಡೆಸಲಿದೆ.
ಸಾಮಾಜಿಕ ಕಾರ್ಯಕರ್ತ ಹರಿಶರಣ್ ದೇವತ್ ಅವರು ವಕೀಲ ಸತ್ಯಂ ಸಿಂಗ್ ರಜಪೂತ್ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
'ಜಾರ್ಖಂಡ್ ಲೋಕ ಸೇವಾ ಆಯೋಗವು ಏಪ್ರಿಲ್ 19ರಂದು ನಡೆಸಿದ ಪರೀಕ್ಷೆಯ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಗಂಭೀರವಾದ ಕಳವಳಗಳು ಇವೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಂವಿಧಾನದ 32ನೇ ವಿಧಿ ಅನ್ವಯ ಈ ಮನವಿ ಸಲ್ಲಿಸಲಾಗಿದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕು. ಇದರಿಂದ, ರಾಜ್ಯದ ಅಧಿಕಾರಿಗಳು ಮತ್ತು ಪರೀಕ್ಷಾ ಸಂಸ್ಥೆಗಳ ಕುರಿತು ನಿಷ್ಪಕ್ಷಪಾತವಾದ ತನಿಖೆ ಸಾಧ್ಯವಾಗುತ್ತದೆ ಎಂದು ಕೋರಲಾಗಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ, ವಿ. ಮೋಹನಾ ಅವರನ್ನೊಳಗೊಂಡ ಪೀಠವು, ವಿಚಾರಣೆ ನಡೆಸುವ ಸಾಧ್ಯತೆ ಇದೆ.

