HEALTH TIPS

ಜಾತಿಗಣತಿಯ ಪ್ರಶ್ನಾವಳಿ ರದ್ದುಗೊಳಿಸಿ: ಪ್ರಧಾನಿಗೆ ಖರ್ಗೆ, ರಾಹುಲ್ ಪತ್ರ

ನವದೆಹಲಿ: ಜಾತಿಗಣತಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಈಗಿನ ಪ್ರಶ್ನಾವಳಿಯನ್ನು ರದ್ದುಗೊಳಿಸಿ, ಹೊಸ ಪ್ರಶ್ನಾವಳಿ ರೂಪಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.


ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿಯಾಗಿ ಪತ್ರ ಬರೆದಿರುವ ಉಭಯ ನಾಯಕರು, 'ನಿಖರವಾದ ದತ್ತಾಂಶವಿಲ್ಲದೆ ಸಾಮಾಜಿಕ ನ್ಯಾಯದ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಿಲ್ಲ.

ಜಾತಿಗಣತಿಯಿಂದ ಮಾತ್ರ ವಿವಿಧ ಸಮುದಾಯಗಳ ಸಂಖ್ಯಾಬಲ ಹಾಗೂ ಅವುಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ನಿಖರ ಚಿತ್ರಣ ದೊರೆಯಲಿದೆ' ಎಂದು ಹೇಳಿದ್ದಾರೆ.

ಜನಗಣತಿಯಲ್ಲಿ ಜಾತಿಯ ವಿವರ ದಾಖಲಿಸಲು ಕೇಂದ್ರ ಸರ್ಕಾರ ಮುಕ್ತ ಮಾದರಿಯ (ಓಪನ್ ಎಂಡೆಡ್) ಪ್ರಶ್ನೆಗಳನ್ನು ಬಳಸಲು ಮುಂದಾಗಿರುವುದನ್ನು ಅವರು ಆಕ್ಷೇಪಿಸಿದ್ದಾರೆ. ಈ ವಿಧಾನದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜಾತಿಗೆ ಯಾವುದೇ ಹೆಸರನ್ನು ನೀಡಿದರೂ ಅದನ್ನೇ ದಾಖಲಿಸುವ ಸಾಧ್ಯತೆಯಿದೆ. ಇದರಿಂದ ಒಂದೇ ಜಾತಿಯು ವಿವಿಧ ಹೆಸರುಗಳಲ್ಲಿ ಪ್ರತ್ಯೇಕವಾಗಿ ದಾಖಲಾಗುವ ಅಪಾಯವಿದೆ. ಇದು ಜಾತಿಗಣತಿಯ ಮೂಲ ಉದ್ದೇಶವನ್ನೇ ವಿಫಲಗೊಳಿಸಬಹುದು ಎಂದು ತಿಳಿಸಿದ್ದಾರೆ.

'ಒಂದು ಸಮುದಾಯದ ಜನಸಂಖ್ಯೆಯೇ ನಿಖರವಾಗಿ ದಾಖಲಾಗದಿದ್ದರೆ, ಅದರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಮೌಲ್ಯಮಾಪನವೂ ದೋಷಪೂರಿತವಾಗಲಿದೆ. ಇದರಿಂದ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಧಕ್ಕೆಯಾಗಬಹುದು. ಶಿಕ್ಷಣ, ಉದ್ಯೋಗ, ಕಲ್ಯಾಣ ಯೋಜನೆಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿ ನಿರ್ಧಾರಗಳ ಮೇಲೂ ಪರಿಣಾಮ ಬೀರಲಿದೆ' ಎಂದು ಪತ್ರದಲ್ಲಿ ಹೇಳಿದ್ದಾರೆ.

ವಿಶೇಷವಾಗಿ, ಪ್ರಸ್ತುತ ಪ್ರಶ್ನಾವಳಿಯಲ್ಲಿ 'ಹಿಂದುಳಿದ ವರ್ಗ' ಎಂಬ ಅಂಶವನ್ನು ಸೇರಿಸದಿರುವುದರಿಂದ ದೇಶದ ಒಬಿಸಿ ಜನಸಂಖ್ಯೆಯ ಪ್ರಮಾಣವನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಜಾತಿಗಣತಿ ನಡೆಸುವುದು ಮಾತ್ರ ಮುಖ್ಯವಲ್ಲ; ಅದನ್ನು ವೈಜ್ಞಾನಿಕವಾಗಿ ಮತ್ತು ನಿಖರವಾಗಿ ನಡೆಸುವುದು ಮುಖ್ಯ. ಬಿಹಾರ ಹಾಗೂ ತೆಲಂಗಾಣದಲ್ಲಿ ಜಾತಿಗಣತಿಗಾಗಿ ಅಳವಡಿಸಿಕೊಂಡಿರುವ ವಿಧಾನಗಳನ್ನು ಪರಿಶೀಲಿಸಿ, ಅಗತ್ಯ ಅಂಶಗಳನ್ನು ಅಳವಡಿಸಿಕೊಳ್ಳಬಹುದು' ಎಂದು ಅವರು ಸಲಹೆ ನೀಡಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries