ಕುಂಬಳೆ: ಬಂದ್ಯೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ವಾಹನ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿದ್ದು, ಅಜರಲ್ಲಿದ್ದ ರೋಗಿ ದಾರುಣವಾಗಿ ಮೃತಪಟ್ಟು, ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿತು.
ಉಪ್ಪಳ ಕೆಎಸ್‍ಇಬಿಯ ಗುತ್ತಿಗೆದಾರ ಬಂದ್ಯೋಡು ಸಮೀಪದ ಅಡ್ಕ ನಿವಾಸಿ ಅಶೋಕ(41) ಮೃತಪಟ್ಟವರು. ಇವರ ಪತ್ನಿ ಪ್ರತಿಭಾ, ಸಹೋದರ ರಾಜೇಶ್, ರಾಜೇಶರ ಪತ್ನಿ ಹಾಗೂ ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾರೋಗ್ಯ ನಿಮಿತ್ತ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಅಶೋಕ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಇವರನ್ನು ಉನ್ನತ ಚಿಕಿತ್ಸೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ರೋಗಿ ಅಶೋಕ ಅವರನ್ನು ಕೂಡಲೇ ಉಪ್ಪಳ ಮತ್ತು ಅನಂತರ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗಿರಲಿಲ್ಲ.



