ಕಠ್ಮಂಡು: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.
ಪ್ರವಾಹದ ಪರಿಣಾಮಕ್ಕೆ ಒಳಗಾದ ಭಾರತೀಯರ ಕುರಿತು ಮಾಹಿತಿ ಪಡೆಯಲು ಹಾಗೂ ನೆರವು ಕೋರಲು +977 985 131 6807 ಮತ್ತು +977 970 910 7500 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯೂ ತುರ್ತು ನೆರವಿಗಾಗಿ 1234 (ಉಚಿತ ತುರ್ತು ಸಂಖ್ಯೆ), 1144 (ಹಾಟ್‌ಲೈನ್) ಹಾಗೂ 9851289445 (ಪ್ರವಾಸಿ ಪೊಲೀಸ್ ಸಹಾಯವಾಣಿ) ಸಂಖ್ಯೆಗಳನ್ನೂ ಪ್ರಕಟಿಸಿದೆ.
ಟಿಬೆಟ್ ಗಡಿಯಲ್ಲಿರುವ ನೇಪಾಳದ ರಸುವಾ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹವು ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ನೇಪಾಳದ ರಸುವಾ, ಧಾಡಿಂಗ್ ಹಾಗೂ ಕಠ್ಮಂಡುವಿನ ನೈಋತ್ಯ ಭಾಗದಲ್ಲಿರುವ ನುವಾಕೋಟ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದೆ. ಈ ದುರಂತದಲ್ಲಿ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು, ನದಿ ತೀರದ ಹಲವು ವಸತಿಪ್ರದೇಶಗಳು ಜಲಾವೃತಗೊಂಡಿವೆ. ಕನಿಷ್ಠ ಹನ್ನೆರಡು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಪ್ರವಾಹದ ಬಳಿಕ ಒಟ್ಟು 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ವಿದೇಶಿಗರು ಮತ್ತು 93 ನೇಪಾಳಿ ಪ್ರಜೆಗಳು ಸೇರಿದ್ದಾರೆ. ನಾಪತ್ತೆಯಾದ ವಿದೇಶಿಗರಲ್ಲಿ 105 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇದ್ದಾರೆ. ಉಳಿದವರು ಅಮೆರಿಕ, ಮಲೇಷ್ಯಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳ ಪ್ರವಾಸಿಗರು ಎಂದು ತಿಳಿಸಲಾಗಿದೆ.
ನಾಪತ್ತೆಯಾದ ಭಾರತೀಯರಲ್ಲಿ ಕನಿಷ್ಠ 59 ಮಂದಿ ಕೈಲಾಸ ಮಾನಸ ಸರೋವರ ಯಾತ್ರಿಕರು ಎಂದು ಸಮ್ರಾಟ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆ ತಿಳಿಸಿದೆ.

