HEALTH TIPS

ಭಾರತದ ಅಧ್ಯಕ್ಷತೆಯಲ್ಲಿ 18ನೇ ಬ್ರಿಕ್ಸ್ ಶೃಂಗ: ಭಾಗವಹಿಸುವ ನಾಯಕರು ಯಾರೆಲ್ಲಾ?

ನವದೆಹಲಿ: ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯಲ್ಲಿ ಭಾರತ ಅಧ್ಯಕ್ಷತೆಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಈ ಮಹತ್ವದ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪ್ರಮುಖ ನಾಯಕರು ಯಾರೆಲ್ಲ? 


ಷಿ ಜಿನ್‌ಪಿಂಗ್: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

2013ರಿಂದ ಚೀನಾದ ಅಧ್ಯಕ್ಷರಾಗಿರುವ ಜಿನ್‌ಪಿಂಗ್, ಈ ಹಿಂದೆ 2019ರಲ್ಲಿ ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ಮೋದಿಯವರೊಂದಿಗೆ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು 2016ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. 2014ರ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು, ಆಗ ಪ್ರಧಾನಿ ಮೋದಿಯವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದರು.

ವ್ಲಾದಿಮಿರ್ ಪುಟಿನ್ : ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿರುವ ಪುಟಿನ್, 2012ರಿಂದ ರಷ್ಯಾದ ಅಧ್ಯಕ್ಷರಾಗಿದ್ದಾರೆ. ರಷ್ಯಾ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರ. ಈ ಹಿಂದೆ 2025ರ ಡಿಸೆಂಬರ್‌ನಲ್ಲಿ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು.

ಸಿರಿಲ್ ರಾಮಫೋಸಾ: 2024ರ ರಾಷ್ಟ್ರೀಯ ಮತ್ತು ಪ್ರಾಂತೀಯ ಚುನಾವಣೆಗಳಲ್ಲಿ ಗೆದ್ದು ಜೂನ್ 2024ರಲ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. 1994ರ ಏಪ್ರಿಲ್ 27ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಗೆದ್ದು ಸಂಸತ್ ಸದಸ್ಯರಾದರು. ಸಂವಿಧಾನ ಸಭೆಯ ಅಧ್ಯಕ್ಷರಾಗಿಯೂ ಆಯ್ಕೆಯಾದರು. 2019ರ 70ನೇ ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಿದ್ದರು.

ಮಸೂದ್ ಪೆಜೆಶ್ಕಿಯನ್: 2024ರಿಂದ ಇರಾನ್ ಅಧ್ಯಕ್ಷರಾಗಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ಅವರು ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ಮಹತ್ವ ಪಡೆದಿದೆ. ಅವರ ಈ ಪ್ರವಾಸ ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕದಲ್ಲೂ ಕುತೂಹಲ ಮೂಡಿಸಿದೆ.

ಅಬ್ದುಲ್ ಫತ್ತಾಹ್ ಅಲ್ ಸಿಸಿ: ಈ ಹಿಂದೆ 2023ರಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಈಜಿಪ್ಟ್ ಅಧ್ಯಕ್ಷ ಸಿಸಿ, 74ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಇದಕ್ಕೂ ಮೊದಲು 2015ರ ಅಕ್ಟೋಬರ್‌ನಲ್ಲಿ ನಡೆದ ಭಾರತ-ಆಫ್ರಿಕಾ 3ನೇ ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ 2016ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಪ್ರಬೋವೊ ಸುಬಿಯಾಂಟೊ: ಇಂಡೋನೇಷ್ಯಾ ಅಧ್ಯಕ್ಷರು ಕೂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಬೋವೊ ಅವರು 2025ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಅವರು 2026ರ ಜುಲೈನಲ್ಲಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದರು.

ಅಬಿ ಅಹ್ಮದ್ ಅಲಿ: ಇಥಿಯೋಪಿಯಾ ಪ್ರಧಾನಮಂತ್ರಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರು 2018ರ ಏಪ್ರಿಲ್‌ನಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಅನ್ವರ್ ಇಬ್ರಾಹಿಂ: ಮಲೇಷ್ಯಾ ಪ್ರಧಾನಮಂತ್ರಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್: ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್: ಅಬುಧಾಬಿಯ ಯುವರಾಜ 2026ರ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು. 2024ರ ಸೆಪ್ಟೆಂಬರ್‌ನಲ್ಲಿಯೂ ಅವರು ಭಾರತಕ್ಕೆ ಭೇಟಿ ನೀಡಿದ್ದರು.

ಮೌರೊ ವಿಯೆರಾ: ಬ್ರೆಜಿಲ್ ವಿದೇಶಾಂಗ ಸಚಿವ ವಿಯೆರಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ಬ್ರೆಜಿಲ್ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುವ ಸಂಭವ ಇದೆ.

ಉಗಾಂಡಾದ ಉಪಾಧ್ಯಕ್ಷೆ ಜೆಸಿಕಾ ಅಲುಪೊ, ನೈಜೀರಿಯಾದ ಉಪಾಧ್ಯಕ್ಷ ಸೆನೆಟರ್ ಕಾಶಿಂ ಶೆಟ್ಟಿಮಾ, ಕ್ಯೂಬಾದ ವಿದೇಶಾಂಗ ಸಚಿವ ಬ್ರೂನೊ ರೊಡ್ರಿಗಸ್ ಪಾರಿಲ್ಲಾ, ಬೆಲಾರಸ್‌ನ ವಿದೇಶಾಂಗ ಸಚಿವ ಮ್ಯಾಕ್ಸಿಮ್ ರೈಝೆಂಕೋವ್, ವಿಯೆಟ್ನಾಂನ ಪ್ರಧಾನಮಂತ್ರಿ ಲೆ ಮಿನ್ ಹಂಗ್ ಹಾಗೂ ಕಜಕಸ್ತಾನದ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಾಯೆವ್ ಕೂಡ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಬ್ರಿಕ್ಸ್ ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿ ಈ ಒಕ್ಕೂಟವನ್ನು ರಚಿಸಿತ್ತು. 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾ ಸೇರಿಕೊಂಡವು. 2025ರಲ್ಲಿ ಇಂಡೋನೇಷ್ಯಾ ಕೂಡ ಸದಸ್ಯ ರಾಷ್ಟ್ರವಾಯಿತು. ಬೆಲಾರಸ್, ಬೊಲಿವಿಯಾ, ಕಜಕಿಸ್ತಾನ, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್, ಉಗಾಂಡಾ, ಉಜ್ಬೇಕಿಸ್ತಾನ ಮತ್ತು ವಿಯೆಟ್ನಾಂ ಬ್ರಿಕ್ಸ್‌ನ ಪಾಲುದಾರ ರಾಷ್ಟ್ರಗಳಾಗಿವೆ. ಈಗ ಬ್ರಿಕ್ಸ್‌ನಲ್ಲಿ 11 ಸದಸ್ಯ ರಾಷ್ಟ್ರಗಳಿವೆ.

ಭಾರತ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಈ ಹಿಂದೆ 2012, 2016 ಮತ್ತು 2021ರಲ್ಲಿ ಮೂರು ಬಾರಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿದೆ.








 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries