ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ಆರ್ಥಿಕತೆಗೆ ಜಿ7 ದೇಶಗಳಿಗಿಂತ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು.
ಬ್ರಿಕ್ಸ್ ಸಮ್ಮೇಳನಕ್ಕೂ ಮುನ್ನ ನಡೆದ ವ್ಯಾಪಾರ ವೇದಿಕೆ ಸಭೆಯಲ್ಲಿ ಮಾತನಾಡಿದ ಅವರು, 'ಕಳೆದ ಐದು ವರ್ಷಗಳಲ್ಲಿ ವಿಶ್ವದ ಒಟ್ಟು ಜಿಡಿಪಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು ಶೇ 40ಕ್ಕಿಂತ ಹೆಚ್ಚಿದೆ. ಇದೇ ಅವಧಿಯಲ್ಲಿ ಜಿ7 ರಾಷ್ಟ್ರಗಳ ಪಾಲು ಶೇ 29ರಷ್ಟಿದೆ' ಎಂದು ತಿಳಿಸಿದರು.
'ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ಕಳೆದ ಐದು ವರ್ಷಗಳ ಅಂಕಿ-ಅಂಶಗಳೇ ಇದಕ್ಕೆ ಸಾಕ್ಷಿ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದ ಹಳೆಯ ಶಕ್ತಿಗಳ ಬದಲಿಗೆ ಹೊಸ ಆರ್ಥಿಕ ಶಕ್ತಿಗಳು ಮುನ್ನೆಲೆಗೆ ಬರುತ್ತಿವೆ' ಎಂದು ಪುಟಿನ್ ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಕಿಡಿ
ಪಾಶ್ಚಿಮಾತ್ಯ ರಾಷ್ಟ್ರಗಳು ಇತರ ದೇಶಗಳು ಆರ್ಥಿಕವಾಗಿ ಸದೃಢವಾಗದಂತೆ ಅಡ್ಡಿಪಡಿಸುತ್ತಿವೆ ಎಂದು ಪುಟಿನ್ ಆರೋಪಿಸಿದರು. 'ಸ್ಪರ್ಧೆಯ ಹೆಸರಿನಲ್ಲಿ ಎದುರಾಳಿಗಳ ಆರ್ಥಿಕ ಸಾಮರ್ಥ್ಯ ಕುಗ್ಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.
'ದೇಶಗಳ ನಡುವೆ ಸ್ಪರ್ಧೆ ಇರಬೇಕು. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಹಿಂದಿನ ಸ್ಥಾನವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ತಪ್ಪಾದ ಹಾದಿ ತುಳಿಯುತ್ತಿವೆ. ಕೆಲವೊಮ್ಮೆ ಈ ಸ್ಪರ್ಧೆ ಅಸಹ್ಯಕರ ರೂಪ ಪಡೆಯುತ್ತಿದೆ' ಎಂದು ಅವರು ಹೇಳಿದರು.
'ಪೈಪ್‌ಲೈನ್‌ಗಳನ್ನು ಧ್ವಂಸ ಮಾಡುವುದು, ಅಂತರರಾಷ್ಟ್ರೀಯ ಸಾರಿಗೆ ಮಾರ್ಗಗಳಿಗೆ ತಡೆಯೊಡ್ಡುವುದು, ಹಡಗುಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಪುಟಿನ್ ದೂರಿದರು.
ರಷ್ಯಾ ವಿರುದ್ಧ 30 ಸಾವಿರಕ್ಕೂ ಹೆಚ್ಚು ನಿರ್ಬಂಧ
'ರಷ್ಯಾ ವಿರುದ್ಧ 30 ಸಾವಿರಕ್ಕೂ ಹೆಚ್ಚು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಜಗತ್ತಿನ ಇತರ ಎಲ್ಲ ದೇಶಗಳ ವಿರುದ್ಧ ವಿಧಿಸಲಾಗಿರುವ ನಿರ್ಬಂಧಗಳ ಒಟ್ಟು ಸಂಖ್ಯೆಯ ಎರಡು ಪಟ್ಟು' ಎಂದು ಪುಟಿನ್ ಹೇಳಿದರು.
'ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ರಷ್ಯಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವಾಸಾರ್ಹ ಮತ್ತು ಸ್ಥಿರ ಪಾಲುದಾರರೊಂದಿಗೆ ತನ್ನ ಸಂಬಂಧಗಳನ್ನು ವಿಸ್ತರಿಸಿದೆ' ಎಂದು ಅವರು ತಿಳಿಸಿದರು.

