ನವದೆಹಲಿ: ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಪೋಲಿಸ್ ಅಧಿಕಾರಿಗಳು ಪ್ರತಿಭಟನಾಕಾರರು ಮತ್ತು ಪ್ರದರ್ಶನಾಕಾರರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಉಜ್ಜಲ್ ಭುಯಾನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರ 'ಪೋಲಿಸಿಂಗ್ ದಿ ರಿಪಬ್ಲಿಕ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾ.ಭುಯಾನ್ 'ಭಾರತೀಯ ಪೊಲೀಸ್ ಸೇವೆಯ ಯುವ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರು ಹಾಗೂ ಪ್ರದರ್ಶನಾಕಾರರ ಮೇಲೆ ಹಲ್ಲೆ ಮಾಡುವುದನ್ನು ನೋಡಿದಾಗ ನಾವೆಲ್ಲರೂ ಆಘಾತಕ್ಕೊಳಗಾಗುತ್ತೇವೆ.
ಇದು ಅತ್ಯಂತ ಬೇಸರದ ಸಂಗತಿಯಾಗಿದೆ' ಎಂದು ಹೇಳಿದರು. ಕರ್ತವ್ಯ ನಿರ್ವಹಣೆಯಲ್ಲಿ ಪೊಲೀಸ್ ಅಧಿಕಾರಿಗಳಿಂದ ನಿರೀಕ್ಷಿಸಲಾದ ತಟಸ್ಥತೆಯು ಹೇಗೋ ಮರೆಯಾಗುತ್ತಿರುವುದು ದುರದೃಷ್ಟಕರ. ಇದು ನಿಜಕ್ಕೂ ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದರು.
ಪೊಲೀಸ್ ಅಧಿಕಾರಿಗಳು ಬಂಧನ ಮತ್ತು ವಿಚಾರಣೆ ನಡೆಸುವ ಕುರಿತು ಹಲವಾರು ನಿರ್ದೇಶನಗಳನ್ನು ನೀಡಿದ್ದ ಡಿ.ಕೆ.ಬಸು ವಿರುದ್ಧ ಪಶ್ಚಿಮ ಬಂಗಾಳ ಸರಕಾರ ಪ್ರಕರಣದಲ್ಲಿ (1997) ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪನ್ನು ನ್ಯಾ.ಭುಯಾನ್ ಉಲ್ಲೇಖಿಸಿದರು. ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವ ಅಗತ್ಯವನ್ನೂ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು ಎಂದು ಅವರು ಬೆಟ್ಟು ಮಾಡಿದರು.
ಶಾಂತಿಯುತ ಪ್ರತಿಭಟನಾಕಾರರನ್ನು ಚದುರಿಸಲು ಬಲಪ್ರಯೋಗ ಮಾಡುವುದರ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿರುವ ನ್ಯಾ.ಭುಯಾನ್ ಹಿಂದೊಮ್ಮೆ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತಿದ್ದ ಭಾರತವು ಇಂದು ಸಂಕುಚಿತಗೊಂಡು, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸುವ ಮತ್ತು ಅವರಿಗೆ ಜಾಮೀನು ನಿರಾಕರಿಸುವ ಹಂತಕ್ಕೆ ತಲುಪಿದೆ ಎಂದು ಹೇಳಿದರು.

