ಮುಂಬೈ (PTI): ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗೆ (ಸಿಎಸ್‌ಆರ್) ಸಂಬಂಧಿಸಿ ನಕಲಿ ಜಾಲದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿತು.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿಯ ಎಂಟು ಪ್ರದೇಶಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು.
ಮಾರುಕಟ್ಟೆ ನಿರ್ವಾಹಕರು, ಟ್ರಸ್ಟಿಗಳು, ಮಧ್ಯವರ್ತಿಗಳಿಗೆ ಸೇರಿದ ಜಾಗಗಳಲ್ಲಿ ಶೋಧ ಮಾಡಲಾಗಿದೆ. 'ಬೋಗಸ್ ಸಿಎಸ್‌ಆರ್ ಜಾಲದ ಕಾರ್ಯಾಚರಣೆ ಮತ್ತು ನೂರಾರು ಕೋಟಿ ರೂಪಾಯಿಗಳ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದ ನಂತರ ತನಿಖೆ ನಡೆಸಲಾಗುತ್ತಿದೆ' ಎಂದು ಇ.ಡಿ ತಿಳಿಸಿದೆ.
ಕಡ್ಡಾಯ ಸಿಎಸ್‌ಆರ್ ಕೊಡುಗೆಗಳನ್ನು ಪಡೆಯಲು ವಿಶೇಷ ಟ್ರಸ್ಟ್‌ಗಳನ್ನು ರಚಿಸಿಕೊಂಡು, ಆನಂತರ ಕಮಿಷನ್ ಪಡೆದು ಮರಳಿ ದಾನಿಗಳಿಗೇ ತಲುಪಿಸುವ ಉದ್ದೇಶವನ್ನು ಈ ಜಾಲ ಹೊಂದಿತ್ತು ಎಂಬ ಶಂಕೆಯನ್ನು ಇ.ಡಿ ವ್ಯಕ್ತಪಡಿಸಿದೆ.

