HEALTH TIPS

ಪಟಾಕಿಗೆ ಪೂರ್ಣ ನಿಷೇಧವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: 'ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ ಹೇರುವುದಿಲ್ಲ; ಆದರೆ, ಅನಿಯಂತ್ರಿತವಾಗಿ ಇಡೀ ದಿನ ಸಿಡಿಸಲು ಸಹ ಅವಕಾಶ ನೀಡುವುದಿಲ್ಲ' ಎಂದು ಹೇಳುವ ಮೂಲಕ, ಸುಪ್ರೀಂ ಕೋರ್ಟ್ ಸಮತೋಲಿತ ಮಾರ್ಗವೊಂದನ್ನು ಅನುಸರಿಸಿದೆ.

'ಸಂಪೂರ್ಣ ನಿಷೇಧ ಹೇರಿದರೆ ಹಬ್ಬ ಆಚರಿಸುವವರ ಭಾವನೆಗೆ ನೋವು ಉಂಟಾಗಬಹುದು.

ಅಂತೆಯೇ, ದಿನವಿಡೀ ಪಟಾಕಿ ಸಿಡಿಸಲು ಬಿಟ್ಟರೆ ಹಿರಿಯರು, ರೋಗಿಗಳು ಮತ್ತು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು' ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠವು, 'ಇದಕ್ಕಾಗಿ ನಿರ್ದಿಷ್ಟ ಸಮಯ ನಿಗದಿಪಡಿಸುವ ಅಗತ್ಯವಿದೆ' ಎಂದು ಹೇಳಿದೆ.

ದೀಪಾವಳಿ ಆಸುಪಾಸಿನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ದೆಹಲಿ ಮತ್ತು ಇತರ ರಾಜ್ಯಗಳು ವಾಯು ಮಾಲಿನ್ಯದ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅಂಶವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಬುಧವಾರದ ವಿಚಾರಣೆ ವೇಳೆ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು, 'ನಾವು ಪರಿಹಾರ ಕಂಡುಕೊಳ್ಳಬೇಕಾಗಿದ್ದು, ನಿರ್ದಿಷ್ಟ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗುವುದು' ಎಂದು ಭರವಸೆ ನೀಡಿತು.

ಬೇರಿಯಂ ಆಧಾರಿತ ಪಟಾಕಿಗಳ ಬಳಕೆಯ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿಕ್ರಿಯೆಯನ್ನು ಸಲ್ಲಿಸಲು ಅಕ್ಟೋಬರ್ 15ರವರೆಗೆ ಸಮಯ ಕೇಳಿದ ಐಶ್ವರ್ಯಾ ಭಾಟಿ, 'ಈ ಮಾದರಿಯ ಪಟಾಕಿಗಳ ಹೊರಾಂಗಣ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ' ಎಂದು ಹೇಳಿದರು. ಈ ಮಾದರಿಯ ಪಟಾಕಿಗಳ ಪರಿಣಾಮವನ್ನು ಪರಿಶೀಲಿಸುವುದಾಗಿ ಹೇಳಿದ ನ್ಯಾಯಪೀಠವು, ಸಮಯಾವಕಾಶ ನೀಡಲು ಒಪ್ಪಿಕೊಂಡಿತು.

ಅಕ್ಟೋಬರ್‌ನಿಂದ ಜನವರಿ ನಡುವೆ ವಾಯು ಮಾಲಿನ್ಯದ ಸಮಸ್ಯೆ ಎದುರಿಸುವ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿಗಳ ಬಳಕೆಗೆ ನಿರ್ಬಂಧ ವಿಧಿಸಿ, ಸುಪ್ರೀಂ ಕೋರ್ಟ್ 2015ರಿಂದಲೇ ನಿರ್ದೇಶನಗಳನ್ನು ನೀಡುತ್ತ ಬಂದಿದೆ. ಆದರೆ, 2025ರ ಅಕ್ಟೋಬರ್‌ನಲ್ಲಿ ದೆಹಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ ದೀಪಾವಳಿ ದಿನದಂದು ಹಸಿರು ಪಟಾಕಿ ಬಳಕೆಗೆ ಅನುಮತಿಸಿ ನಿರ್ಬಂಧವನ್ನು ಸಡಿಲಿಸಲಾಗಿತ್ತು.

'ಸೀಮಿತ, ಷರತ್ತುಬದ್ಧ ಅನುಮತಿ ನೀಡಿ'

ಪಟಾಕಿ ಕುರಿತು ನ್ಯಾಯಪೀಠಕ್ಕೆ ಮಾಹಿತಿ ಸಲ್ಲಿಸಿದ ಐಶ್ವರ್ಯಾ ಭಾಟಿ, 'ನಿಷೇಧಿತ ರಾಸಾಯನಿಕಗಳನ್ನು ಬಳಸದೆ, ಸಮರ್ಪಕ ಪರವಾನಗಿ ಪಡೆದ ತಯಾರಕರು ತಯಾರಿಸಿದ್ದರೆ ಮಾತ್ರ ಇಂಥ ಪಟಾಕಿಗಳನ್ನು ಬಳಸಲು ಅವಕಾಶ ನೀಡಬಹುದು' ಎಂದು ಹೇಳಿದರು.

'ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ರಾಷ್ಟ್ರೀಯ ಪ‍ರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್-ಎನ್‌ಇಇಆರ್‌ಐ) ಶಿಫಾರಸಿಗೆ ಅನ್ವಯವಾಗಿ ಶಬ್ದ, ಹೊಗೆ ಪ್ರಮಾಣ ಹೊಂದಿರುವ ಮತ್ತು ಸುರಕ್ಷಾ ಮಾನದಂಡಗಳನ್ನು ಪೂರೈಸುವ ಪಟಾಕಿಗಳಿಗೆ ಸೀಮಿತ ಮತ್ತು ಷರತ್ತುಬದ್ಧ ಅನುಮತಿ ನೀಡಬಹುದು' ಎಂದು ಅವರು ಗಮನಕ್ಕೆ ತಂದರು.

'ಸಲಹೆಗಳನ್ನು ಸ್ವೀಕರಿಸಲು ಮುಕ್ತವಾಗಿದ್ದೇವೆ' ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.

ಸಿಎಸ್‌ಐಆರ್-ಎನ್‌ಇಇಆರ್‌ಐ ಸಹಯೋಗದಲ್ಲಿ 'ಮುಂದಿನ ಪೀಳಿಗೆಯ ಹಸಿರು ಪಟಾಕಿ'ಗಳನ್ನು ಅಭಿವೃದ್ಧಿಪಡಿಸಿದ್ದು, ಕಡಿಮೆ ಬೇರಿಯಂ ಲವಣ ಬಳಸುವ ಮೂಲಕ ಇವುಗಳು ಕಡಿಮೆ ಪ್ರಮಾಣದ ಹೊಗೆಯನ್ನು ಹೊರಸೂಸುವಂತೆ ವಿನ್ಯಾಸಗೊಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries