101 ಅಕ್ರಮ ಆಹಾರ ಮಳಿಗೆಗಳ ಛಾಯಾಚಿತ್ರ ಜಿಲ್ಲಾಧಿಕಾರಿಗೆ ಸಲ್ಲಿಕೆ; ಬೇಡಿಕೆ ಈಡೇರದಿದ್ದರೆ ನ. 25ರಿಂದ ಹೋಟೆಲ್‌ಗಳ ಮುಂದೆ ಪರ್ಯಾಯ ಮಳಿಗೆ ಸ್ಥಾಪನೆ ಎಚ್ಚರಿಕೆ
ಕಾಸರಗೋಡು: ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಆಹಾರ ಮಳಿಗೆಗಳು ಹಾಗೂ ಹೋಟೆಲ್‌ಗಳಿಂದ ಅಧಿಕೃತ ಹೋಟೆಲ್ ಉದ್ಯಮಕ್ಕೆ ತೀವ್ರ ಸಂಕಷ್ಟ ಎದುರಾಗುತ್ತಿದ್ದು, ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೇರಳ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (ಕೆಎಚ್‌ಆರ್‌ಎ) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅ. 31ರಂದು ಪ್ರತಿಭಟನೆ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ರಸ್ತೆಯಲ್ಲಿರುವ ಕೆಎಚ್‌ಆರ್‌ಎ ಭವನದ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ರಘುವೀರ್ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆಯ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಲಿದ್ದು, ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಮೆರವಣಿಗೆ ಸಮಾಪ್ತಿಗೊಳ್ಳಲಿದೆ.
ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ನೀಡುವ ರೀತಿಯಲ್ಲಿ ರಸ್ತೆ ಬದಿಗಳಲ್ಲಿ ಅಕ್ರಮ ಆಹಾರ ಮಳಿಗೆಗಳು ಹಾಗೂ ಹೋಟೆಲ್‌ಗಳು ಕಾರ್ಯಾಚರಿಸುತ್ತಿವೆ. ಇಂತಹ ಕೇಂದ್ರಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಅನಧಿಕೃತ ಹೋಟೆಲ್‌ಗಳನ್ನು ತೆರವುಗೊಳಿಸಿ ಅಧಿಕೃತ ಹೋಟೆಲ್ ಉದ್ಯಮವನ್ನು ಸಂರಕ್ಷಿಸಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ರಸ್ತೆ ಬದಿಗಳಲ್ಲಿ ಕಾರ್ಯಾಚರಿಸುತ್ತಿರುವ 101 ಅಕ್ರಮ ಆಹಾರ ಮಳಿಗೆಗಳು ಹಾಗೂ ಹೋಟೆಲ್‌ಗಳ ಛಾಯಾಚಿತ್ರಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸಲು ವಿಫಲರಾದರೆ ನವೆಂಬರ್ 25ರಿಂದ ಅಧಿಕೃತ ಹೋಟೆಲ್‌ಗಳ ಮುಂಭಾಗದಲ್ಲೇ ಪರ್ಯಾಯ ಆಹಾರ ಮಳಿಗೆಗಳನ್ನು ಸ್ಥಾಪಿಸಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಕುಟುಂಬ ಭದ್ರತಾ ಯೋಜನೆಯಡಿ ಮುಳ್ಳೇರಿಯಾದ ದುರ್ಗಾ ಹೋಟೆಲ್‌ನ ದಿವಂಗತ ಮಾಲೀಕ ನಾಯಕ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಆರ್. ರೆಸಾಕ್ ಅವರು ನೆರವಿನ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ, ರಾಜ್ಯ ಕಾರ್ಯದರ್ಶಿ ನಾರಾಯಣ ಪೂಜಾರಿ, ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಗಜಾಲಿ ಹಾಗೂ ಕಾರ್ಯಾಧ್ಯಕ್ಷ ರಾಜನ್ ಕಲಕ್ಕಾರ ಉಪಸ್ಥಿತರಿದ್ದರು.



