ಕಾಸರಗೋಡು : ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕ ಕುರಿತು ಮಂಗಳವಾರ ಕಾಸರಗೋಡು ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಈ ಕುರಿತು ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ವಿಷಯ ಮಂಡಿಸಿದರು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಕನ್ನಡ ಅರಿಯದ ಶಿಕ್ಷಕನ ನೇಮಕ ಪ್ರತಿಭಟಿಸಿ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಎರಡು ದಿನಗಳಿಂದ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ನೀಡದ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಲೋಕ ಸೇವಾ ಆಯೋಗದ ರ್ಯಾಂಕ್ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಇದರಿಂದ ಕನ್ನಡ ಅರಿಯದ ಶಿಕ್ಷಕರನ್ನು ನೇಮಕಾತಿ ನಡೆಯುತ್ತಿದೆ. ಈ
ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹರ್ಷಾದ್ ವರ್ಕಾಡಿ ಒತ್ತಾಯಿಸಿದರು.
ಹರ್ಷಾದ್ ವರ್ಕಾಡಿಯವರ ಮಾತಿಗೆ ಧ್ವನಿಗೂಡಿಸಿದ ಸದಸ್ಯರಾದ ಫರೀದಾ ಝಕೀರ್, ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಜೋಸ್ ಪಾದಲ್, ಶಾನ್ ವಾಜ್ ಪಾದೂರು ಮೊದಲಾದವರು ಕೂಡಲೇ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕಾತಿ ಬಗ್ಗೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಪುಷ್ಪಾ ಕೆ.ವಿ ಸ್ಪಷ್ಟನೆ ನೀಡಿದರೂ ತೃಪ್ತರಾಗದ ಸದಸ್ಯರು, ಈ ಕ್ಷಣದಲ್ಲೇ ಈ ಸಮಸ್ಯೆ ಪರಿಹರಿಸಬೇಕು. ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಅರಿಯದ ಶಿಕ್ಷಕರನ್ನು ಕಾಲಿಡಲು ಬಿಡುವುದಿಲ್ಲ. ಈ ಹಿಂದೆ ಮಂಗಲ್ಪಾಡಿ, ಪೈವಳಿಕೆ, ಪೆರಡಾಲ, ಬೇಕಲ ಮೊದಲಾದ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಾತಿ ನಡೆದಿದೆ. ಆದರೆ ಹೋರಾಟದ ಫಲವಾಗಿ ಸಾಧ್ಯವಾಗಿಲ್ಲ. ಮತ್ತೆ ಮತ್ತೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರು ವಂತೆ ಮಾಡಿದೆ ಎಂದು ಸದಸ್ಯರು ಹೇಳಿದರು.
ಈ ನಿಮಿಷದಿಂದಲೇ ಮೂಡಂಬೈಲು ಶಾಲೆಗೆ ಕನ್ನಡ ಅರಿಯದ ಶಿಕ್ಷಕರ ನೇಮಕಾತಿಗೆ ತಡೆ ನೀಡಬೇಕು. ಶಿಕ್ಷಕ ನ್ಯಾಯಾಲಯದ ಮೆಟ್ಟಲು ಹತ್ತಿದರೂ ಹೆದರಲಾರೆವು. ಎದುರಿಸಲು ಜಿಲ್ಲಾ ಪಂಚಾಯತಿ ಸಿದ್ಧವಿದೆ. ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ ಬಶೀರ್ ಹೇಳಿದರು.
ನವಂಬರ್ ಎರಡರ ತನಕ ಶಿಕ್ಷಕನ ನೇಮಕ ಮಾಡಬಾರದು. ನವಂಬರ್ ಮೂರರಂದು ಜಿಲ್ಲೆಗೆ ಆಗಮಿಸುವ ರಾಜ್ಯ ಶಿಕ್ಷಣ ಸಚಿವ ಎ. ರವೀಂದ್ರನಾಥ್ ರವರನ್ನು ಜಿಲ್ಲಾ ಪಂಚಾಯತಿ ನಿಯೋಗ ಭೇಟಿ ಮಾಡಿ ಮನವರಿಕೆ ಮಾಡುವ ತೀರ್ಮಾನವನ್ನು ಈ ಸಂದರ್ಭ ಒಕ್ಕೊರಲಿನಿಂದ ಕೈಗೊಳ್ಳಲಾಯಿತು.

