ಕಾಸರಗೋಡು: ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಜಾರಿಯಲ್ಲಿರುವ ಸಂದರ್ಭದಲ್ಲಿ ನಡೆದ ವ್ಯಾಪಾರ ವ್ಯವಹಾರದ ಲೆಕ್ಕಾಚಾರದ ಹೆಸರಿನಲ್ಲಿ ಸರಕು ಸೇವಾ ತೆರಿಗೆ(ಜಿಎಸ್‍ಟಿ) ಇಲಾಖೆಯ ಅಧಿಕಾರಿಗಳು ವ್ಯಾಪಾರ ಸಂಸ್ಥೆಗಳಿಗೆ ಪದೇ ಪದೇ ದಾಳಿ ನಡೆಸಿ ಅದರ ಹೆಸರಿನಲ್ಲಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹಾಗು ಅಂತಹ ನೀತಿಯನ್ನು ಖಂಡಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೇತೃತ್ವದಲ್ಲಿ ವ್ಯಾಪಾರಿಗಳು ಮಂಗಳವಾರ ಕೇರಳ ರಾಜ್ಯದಾದ್ಯಂತ ತಮ್ಮ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ಹರತಾಳ ನಡೆಸಿದರು.
ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ವ್ಯಾಪಾರಿಗಳ ಹರತಾಳ ಸಂಜೆ 6 ಗಂಟೆಯ ತನಕ ಮುಂದುವರಿಯಿತು. ಇದರಿಂದಾಗಿ ರಾಜ್ಯದ ವ್ಯಾಪಾರ ವಲಯ ಸ್ತಬ್ದಗೊಂಡಿತು. 2011-12 ರ ಅವಧಿಯ ಲೆಕ್ಕಾಚಾರಗಳನ್ನು ಹಾಜರುಪಡಿಸಬೇಕೆಂದು ನಿರ್ದೇಶಿಸಿ ಹೊರಡಿಸಲಾದ ನೋಟೀಸನ್ನು ಹಿಂತೆಗೆದುಕೊಳ್ಳಬೇಕು, ಪ್ರವಾಹ ಸೆಸ್ಸ್ ಹಿಂತೆಗೆಯಬೇಕು, ಬಾಕಿ ತೆರಿಗೆ ಪಾವತಿಗೆ ತೀರ್ಪು ಕಲ್ಪಿಸಲು ನೇಮಿಸಲಾದ ಆಮ್ನೆಸ್ಟಿ ಸಮಿತಿಯಲ್ಲಿ ವ್ಯಾಪಾರಿ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸಬೇಕು, ಈ ಬೇಡಿಕೆಗಳನ್ನು ಅಂಗೀಕರಿಸಿ ಲಿಖಿತ ಭರವಸೆ ನೀಡಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಚಳವಳಿ ನಡೆಯಿತು.
ಇದರಂತೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಎಸ್‍ಟಿ ಉಪ ಆಯುಕ್ತರ ಕಚೇರಿಗೆ ವ್ಯಾಪಾರಿಗಳು ಮಂಗಳವಾರ ಬೆಳಗ್ಗೆ ಜಾಥಾ ನಡೆಸಿ ಧರಣಿ ಹೂಡಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಅಹಮ್ಮದ್ ಶೆರೀಫ್ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಕೆ.ವಿ.ಲಕ್ಷ್ಮಣನ್ ಅಧ್ಯಕ್ಷತೆ ವಹಿಸಿದರು. ಹಲವು ಪದಾ„ಕಾರಿಗಳು ನೇತೃತ್ವ ನೀಡಿದರು.
ವ್ಯಾಪಾರಿಗಳ ಮುಷ್ಕರ ರಾಜ್ಯದಲ್ಲಿ ಪೂರ್ಣ ಹಾಗು ಯಶಸ್ವಿಯಾಗಿದ್ದು, ಹೆಚ್ಚಿನ ಯಾವುದೇ ವ್ಯಾಪಾರ ಸಂಸ್ಥೆಗಳು ತೆರೆಯಲಿಲ್ಲ. ಅದರಿಂದಾಗಿ ವ್ಯಾಪಾರ ವಲಯ ಬಿಕೋ ಎನಿಸಿತು. ಮುಷ್ಕರ ನಿರತ ವ್ಯಾಪಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆರವಣಿಗೆ ಮತ್ತು ಧರಣಿ ನಡೆಸಿದರು. ಇದೇ ವೇಳೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸದೆ ಈ ಹೋರಾಟದಿಂದ ತಮ್ಮ ಸಂಘಟನೆ ಹಿಂದೆ ಸರಿಯದೆಂದು ಸಂಘಟನೆ ರಾಜ್ಯ ಅಧ್ಯಕ್ಷ ಟಿ.ನಸಿರುದ್ದೀನ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಮರ್ಚೆಂಟ್ಸ್ ಚೇಂಬರ್ ಆಫ್ ಕಾಮರ್ಸ್, ಕೇರಳ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್, ಕೇರಳ ಟ್ಯಾಕ್ಸ್ ಪ್ರಾಕ್ಟಿಷಿಯನ್ ಅಸೋಸಿಯೇಶನ್ ಸಹಿತ ಹಲವು ಸಂಘಟನೆಗಳ ವ್ಯಾಪಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿತ್ತು.


