HEALTH TIPS

ನ್ಯಾಯಕ್ಕಾಗಿ ಮುಗಿಲು ಮುಟ್ಟಿದ ಆಕ್ರೋಶ-ಲೋಕಸೇವಾ ಆಯೋಗ ಕಚೇರಿ ಮುಂದೆ ಧರಣಿ-ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಷಡ್ಯಂತ್ರದ ಬಗ್ಗೆ ನ್ಯಾಯಾಲಯದ ಮೆಟ್ಟಲೇರುವ ಚಿಂತನೆ : ಮುರಳೀಧರ ಬಳ್ಳಕ್ಕುರಾಯ


       ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಯ ಬಳಿಕ ನಿರಂತರವಾಗಿ ಕನ್ನಡಿಗರನ್ನು ಹತ್ತಿಕ್ಕಲು ಕೇರಳ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದ್ದು, ಇದೀಗ ಲೋಕ ಸೇವಾ ಆಯೋಗ ಇಂತಹ ಷಡ್ಯಂತ್ರ ನಡೆಸಿದೆ. ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಲಭಿಸಬೇಕಾಗಿದ್ದ ಹಕ್ಕನ್ನು ಕಸಿದುಕೊಳ್ಳಲು ಹಾಗು ಕನ್ನಡಿಗರನ್ನು ಉದ್ಯೋಗದಿಂದ ದೂರವಿಡುವ ಉದ್ದೇಶದಿಂದ ಪಿಎಸ್‍ಸಿ ಕನ್ನಡಿಗರಿಗೆ ಅನ್ಯಾಯವೆಸಗಿದೆ. ಭಾಷಾ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳಲು ಪಿಎಸ್‍ಸಿ ನಡೆಸಿರುವ ಷಡ್ಯಂತ್ರದ ವಿರುದ್ಧ ತೀವ್ರ ಹೋರಾಟದ ಜೊತೆಗೆ ಅನ್ಯಾಯದ ವಿರುದ್ದ ನ್ಯಾಯಾಲಯ ಮೆಟ್ಟಲೇರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅವರು ಹೇಳಿದರು.
        ಇತ್ತೀಚೆಗೆ ಪಿಎಸ್‍ಸಿ ನಡೆಸಿರುವ ಪರೀಕ್ಷೆಯಲ್ಲಿ ನಡೆದಿರುವ ಅನ್ಯಾಯವನ್ನು ಪ್ರತಿಭಟಿಸಿ ಎಲ್.ಡಿ. ಕ್ಲಾರ್ಕ್ ಕನ್ನಡ-ಮಲಯಾಳ ಅಪ್ಲಿಕೆಂಟ್ಸ್ ಫಾರಂ ಕಾಸರಗೋಡು ಮತ್ತು ಕನ್ನಡ ಹೋರಾಟ ಸಮಿತಿಯ ಸಂಯುಕ್ತ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪಿ.ಎಸ್.ಸಿ. ಕಚೇರಿಯ ಮುಂದೆ ಇಂದು(ಮಂಗಳವಾರ)ನಡೆದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ರಾಜ್ಯ ಪುನರ್ವಿಂಗಡಣೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕಾಸರಗೋಡು ಕೇರಳಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಭಾಷಾ ಅಲ್ಪ ಸಂಖ್ಯಾತರಿಗೆ ನೀಡಲಾದ ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳಲು ದಿನಂಪ್ರತಿ ಒಂದಿಲ್ಲೊಂದು ಷಡ್ಯಂತ್ರವನ್ನು ರೂಪಿಸುತ್ತಿರುವ ಕೇರಳ ಸರ್ಕಾರ ಮತ್ತು ಪಿಎಸ್‍ಸಿ ಕನ್ನಡಿಗರಿಗೆ ವಂಚಿಸುತ್ತಲೇ ಬಂದಿದೆ. ಇದೀಗ ಪಿ.ಎಸ್.ಸಿ. ಸಂವಿಧಾನ ಬದ್ಧ ಹಕ್ಕನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು ಕನ್ನಡಿಗರನ್ನು ತುಳಿಯಲು, ಮಲಯಾಳಿಗರನ್ನು ಮಾತ್ರ ತುಂಬಲು ಪಿಎಸ್‍ಸಿ ಹುನ್ನಾರ ನಡೆಸಿದ ಭಾಗವಾಗಿ ಕನ್ನಡ ಪ್ರಶ್ನೆಯನ್ನು ಕುಂಠಿತಗೊಳಿಸಿ ಮಲಯಾಳ ಪ್ರಶ್ನೆಯನ್ನು ಅಧಿಕ ನೀಡಿದೆ ಎಂದರು. ಕನ್ನಡಿಗರು ರ್ಯಾಂಕ್ ಯಾದಿಯಲ್ಲಿ ಬರದಂತೆ ಪಿಎಸ್‍ಸಿ ಇಂತಹ ಮೋಸ ಮಾಡಿದೆ ಎಂದು ಆರೋಪಿಸಿದರು. ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರು ಇದ್ದಲ್ಲಿ ಮಾತ್ರವೇ ಕನ್ನಡಿಗರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ಈ ಪ್ರದೇಶದಿಂದ ಹತ್ತಿಕ್ಕಬೇಕು ಎಂಬ ಉದ್ದೇಶವನ್ನಿರಿಸಿಕೊಂಡೇ ಇಂತಹ ಕುಕೃತ್ಯ ನಡೆಸುತ್ತಿದೆ ಎಂದರು. ಇದರ ವಿರುದ್ಧ ತೀವ್ರ ಹೋರಾಟ ಅನಿವಾರ್ಯವಾಗಿದ್ದು, ಕನ್ನಡಿಗರ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುವ ತನಕ ಹೋರಾಟ ನಿಲ್ಲದು ಎಂದು ಅವರು ಹೇಳಿದರು.
       ಕಾರ್ಯಕ್ರಮದಲ್ಲಿ ಎಲ್.ಡಿ. ಕ್ಲಾರ್ಕ್ ಕನ್ನಡ-ಮಲಯಾಳ ಅಪ್ಲಿಕೆಂಟ್ಸ್ ಫಾರಂ ಕಾಸರಗೋಡು ಇದರ ಅಧ್ಯಕ್ಷ ಪ್ರಸನ್ನ ಅವರು ಅಧ್ಯಕ್ಷತೆ ವಹಿಸಿದ್ದರು.
       ಧರಣಿ ಸತ್ಯಾಗ್ರಹದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಜಯ ಕುಮಾರ್, ಡಾ.ಯು.ಮಹೇಶ್ವರಿ, ಸೌಮ್ಯಾ ಮೊದಲಾದವರು ಮಾತನಾಡಿ ಪಿ.ಎಸ್.ಸಿ. ಷಡ್ಯಂತ್ರವನ್ನು ಖಂಡಿಸಿ, ಇದರ ವಿರುದ್ಧ ತೀವ್ರ ಹೋರಾಟ ನಡೆಯಬೇಕೆಂದು ಹೇಳಿದರು. ವಿಶ್ವನಾಥ ರಾವ್, ಲಕ್ಷ್ಮಣ ಪ್ರಭು ಕುಂಬಳೆ, ಸತೀಶ್ ಮಾಸ್ತರ್ ಕೂಡ್ಲು, ಸುಂದರ ಬಾರಡ್ಕ, ಗುರುಪ್ರಸಾದ್ ಕೋಟೆಕಣಿ, ಜೋನ್ ಡಿ'ಸೋಜಾ ಮೊದಲಾದವರು ಉಪಸ್ಥಿತರಿದ್ದರು.
        ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಪ್ಲಿಕೆಂಟ್ಸ್ ಪಾರಂನ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಕಾಶ ಮುಳ್ಳೇರಿಯ ಸ್ವಾಗತಿಸಿ, ಜಯ ಕುಮಾರ್ ವಂದಿಸಿದರು.
       ಧರಣಿಯ ಬಳಿಕ ಲೋಕ ಸೇವಾ ಆಯೋಗ(ಪಿಎಸ್‍ಸಿ) ಕಾಸರಗೋಡು ಜಿಲ್ಲಾ ಅಧಿಕಾರಿ ವಿ.ವಿ.ಪ್ರಮೋದ್ ಅವರಿಗೆ ಮನವಿ ಸಲ್ಲಿಸಲಾಯಿತು. ಭಾಸ್ಕರ ಕಾಸರಗೋಡು, ವಿಷ್ಣು ಭಟ್, ಪ್ರಸನ್ನ, ಗುರುಪ್ರಸಾದ್ ಕೋಟೆಕಣಿ, ಶಶಿಧರ ಶೆಟ್ಟಿ, ಲಕ್ಷ್ಮಣ ಪ್ರಭು ಕುಂಬಳೆ, ಎಸ್.ವಿ.ಭಟ್, ಸತೀಶ್ ಮಾಸ್ತರ್ ಮೊದಲಾದವರು ಪಿಎಸ್‍ಸಿ ಜಿಲ್ಲಾ ಅಧಿಕಾರಿ ಅವರನ್ನು ಭೇಟಿಯಾಗಿ ಕನ್ನಡಿಗರಿಗೆ ಉಂಟಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries