ಮಂಜೇಶ್ವರ: ಮೀಂಜ ಪಂಚಾಯತಿನ ಮೂಡಂಬೈಲು ಸರ್ಕಾರಿ ಪ್ರೌಢಶಾಲೆಗೆ ಕನ್ನಡ ಮಾಧ್ಯಮ ಸಮಾಜ ಶಾಸ್ತ್ರ ಶಿಕ್ಷಕ ಹುದ್ದೆಗೆ ಕನ್ನಡ ಗೊತ್ತಿಲ್ಲದ ತಿರುವನಂತಪುರ ಮೂಲದ ಮಲೆಯಾಳಿ ಅಧ್ಯಾಪಕರೋರ್ವನ್ನು ನೇಮಕಾತಿ ಮಾಡಲಾಗಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ಕನ್ನಡ ಮಾಧ್ಯಮ ಮಕ್ಕಳಿಗೆ ಕನ್ನಡವೇ ಗೊತ್ತಿಲ್ಲದ ಅಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಇವರನ್ನು ಶಾಲೆಗೆ ಸೇರ್ಪಡೆಗೊಳಿಸುವುದಿಲ್ಲವೆಂಬ ನಿರ್ಣಯವನ್ನು ಶಾಲಾ ರಕ್ಷಕ - ಶಿಕ್ಷಕ ಸಮಿತಿ ತೀರ್ಮಾನಿಸಿದೆ. ಕನ್ನಡ ಮಾಧ್ಯಮ ಮೀಸಲಾತಿ ಹುದ್ದೆಗೆ ಕನ್ನಡ ಗೊತ್ತಿದೆಯೆಂಬ ಸುಳ್ಳು ಅಫಿದಾವಿತ್ ನೀಡಿ ತಿರುವನಂತಪುರದ ಈ ಮಲೆಯಾಳಿ ಅಧ್ಯಾಪಕ ಉದ್ಯೋಗ ಗಿಟ್ಟಿಸಿದ್ದು, ಇದೀಗ ಮೂಡಂಬೈಲು ಶಾಲೆಗೆ ನೇಮಕಗೊಳಿಸಲಾಗಿದೆ.
ಇದರ ವಿರುದ್ಧ ನಾಡಿನ ಜನತೆ ಒಗ್ಗಟ್ಟಾಗಿ ಪ್ರತಿಭಟನೆಗಿಳಿದಿದ್ದಾರೆ.
ಸೋಮವಾರ ಶಾಲಾ ಆವರಣದಲ್ಲಿ ನಡೆದ ಪ್ರತಿಭಟನೆಯನ್ನು ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು "ಸರ್ಕಾರ ಮತ್ತು ಲೋಕಸೇವಾ ಆಯೋಗ ಕನ್ನಡ ವಿದ್ಯಾರ್ಥಿಗಳ ಮೇಲೆ ಅನ್ಯಾಯ ಮಾಡುತ್ತಿದೆ, ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಅಧ್ಯಾಪಕರನ್ನೇ ನೇಮಕ ಮಾಡದೇ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವುದು ಘೋರ ಅಪರಾಧವಾಗಿದೆ. ಯಾವ ಕಾರಣಕ್ಕೂ ಇದನ್ನು ಅಂಗೀಕರಿಸಲು ಸಾಧ್ಯವಿಲ್ಲ, ಕನ್ನಡ ಮಕ್ಕಳ ಶಿಕ್ಷಣ ಹಕ್ಕು ಸಂರಕ್ಷಣೆಗಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ರವೀಶ ತಂತ್ರಿ ಕುಂಟಾರು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೊಡಿ, ಜಯರಾಮ ಬಲ್ಲಂಗುಡೇಲು, ಕಂಚಿಲ ಮೊಹಮ್ಮದ್, ಗ್ರಾ.ಪಂ. ಸದಸ್ಯೆ ಚಂದ್ರಾವತಿ, ಜಗದೀಶ ಮೂಡಂಬೈಲು, ಟಿ.ಡಿ.ಸದಾಶಿವ ರಾವ್, ಶರೀಫ್ ಚಿನಾಲ, ಶಿವರಾಮ ಪದಕಣ್ಣಾಯ ಗೋಪಾಲ ಶೆಟ್ಟಿ ಅರಿಬೈಲು, ರಮೇಶ್ ಸುವರ್ಣ, ನಾಗರಾಜ ಪದಕಣ್ಣಾಯ, ರಾಮ ದಡ್ಡಂಗಡಿ ಮುಂತಾದವರು ಉಪಸ್ಥಿತರಿದ್ದರು.
ಸೋಮವಾರ ಪ್ರತಿಭಟನೆಯ ವಾಸನೆ ಬಡಿದ ಹಿನ್ನೆಲೆಯಲ್ಲಿ ಮಲೆಯಾಳಿ ಶಿಕ್ಷಕ ಶಾಲೆಗೆ ಆಗಮಿಸಿರಲಿಲ್ಲ. ಆದರೆ ಮಂಗಳವಾರ(ಇಂದು) ಶಾಲೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಮದಿದೆ. ಮಲೆಯಾಳಿ ಶಿಕ್ಷಕನು ಹುದ್ದೆಗೇರುವುದನ್ನು ತಡೆಯಲು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪದಾಧಿಕಾರಿಗಳು ಸಹಿತ ವಿವಿಧ ಸಂಘಸಂಸ್ಥೆಗಳು ವ್ಯಾಪಕ ಪ್ರಮಾಣದಲ್ಲಿ ಖಂಡಿಸಿ ರಂಗಕ್ಕಿಳಿದಿದೆ.



