ಬದಿಯಡ್ಕ: ಅಂಬೇಡ್ಕರ್ ವಿಚಾರವೇದಿಕೆಯ ಸ್ಥಾಪಕ ದಿ. ಎಂ.ಎಸ್.ಶೇಖರ್‍ರ ಸಂಸ್ಮರಣಾ ಕಾರ್ಯಕ್ರಮವು ಬದಿಯಡ್ಕ ಸಮೀಪದ ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಜರಗಿತು.
ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಾ ಅವರು ಶೇಖರ್‍ರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಉತ್ತಮ ಕಲಾವಿದ, ಸಂಘಟಕ, ಸಾಹಿತಿ, ರೇಖೀತಜ್ಞ, ಕರಾಟೆ ಪಟು ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಶೇಖರ್‍ರವರ ಸಾಧನೆ ಅಪಾರವಾದುದು. ಎಂದಿಗೂ ಪ್ರಚಾರವನ್ನು ಬಯಸದ ಅವರ ಜೊತೆಗಿನ ಒಡನಾಟ ನಮ್ಮೆಲ್ಲರನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದರು. ವೇದಿಕೆಯ ಸದಸ್ಯ ನಾರಾಯಣ ಬಾರಡ್ಕ ಮಾತನಾಡಿ ಎಂ.ಎಸ್.ಶೇಖರ್‍ರವರು ಕಾಸರಗೋಡು ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‍ರ ತತ್ವಾದರ್ಶಗಳನ್ನು ಪ್ರಚಾರಪಡಿಸುವ ಸಾಹಸಕ್ಕೆ ಕೈಹಾಕಿ ತಕ್ಕಮಟ್ಟಿಗೆ ಯಶಸ್ವಿಯಾದ ಒಬ್ಬ ದಿಟ್ಟ ನಾಯಕರಾಗಿದ್ದರು ಎಂದರು.
ವಿಶ್ವನಾಥ್ ಬಿ.ಕೆ., ಶೇಖರ್‍ರ ಧರ್ಮಪತ್ನಿ ಸರಸ್ವತಿ, ಬಾಬು, ಕೃಷ್ಣಕುಮಾರ್, ಶ್ರೀಜಾ, ನಯನರತ್ನ, ಶಿವಾನಂದ ಉಪಸ್ಥಿತರಿದ್ದರು. ಸುಂದರ ಬಾರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ,ವಿಜಯ ಕುಮಾರ್ ಬಾರಡ್ಕ ವಂದಿಸಿದರು.


