ಬದಿಯಡ್ಕ: ಕೊರೊನಾ ಜನಜಾಗೃತಿ ಸಮಿತಿ ರೂಪೀಕರಣ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವು ಬದಿಯಡ್ಕ ಗ್ರಾಮಪಂಚಾಯಿತಿ ಕುಟುಂಬಶ್ರೀ ಹಾಲ್ ನಲ್ಲಿ ಶುಕ್ರವಾರ ನಡೆಯಿತು. ಆರೋಗ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ಮಾರಕ ರೋಗಗಳ ಕುರಿತು ಜನತೆಯು ಜಾಗೃತರಾಗಬೇಕಾಗಿದೆ. ರೋಗಗಳು ಹರಡಂತೆ ಎಚ್ಚರವಹಿಸಬೇಕಾಗಿರುವುದು ಅತೀ ಅಗತ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟುಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಪ್ರಧಾನ ವೈದ್ಯಾಧಿಕಾರಿ ಡಾ. ಸತ್ಯಶಂಕರ ಭಟ್ ಮಾತನಾಡಿ ಕೊರೊನಾದ ಬಗ್ಗೆ ಆತಂಕ ಬೇಡ ಆದರೆ ಕಾಳಜಿ ಅತೀ ಅಗತ್ಯವಾಗಿದೆ. ರೋಗವನ್ನು ಬರದಂತೆ ತಡೆಗಟ್ಟುವಲ್ಲಿ ಜನರ ಸಹಕಾರವಿರಬೇಕು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಅತೀ ವೇಗವಾಗಿ ಹರಡಿದ ಸಾಂಕ್ರಾಮಿಕ ರೋಗಗಳಲ್ಲಿ ಕೋವಿದ್ 2019 ವೈರಸ್‍ಗೆ ಮೊದಲ ಸ್ಥಾನವಿದೆ. ಉಸಿರಾಟ ಸಂಬಂಧವಾಗಿರುವ ಕೊರೊನಾ ವೈರಸ್‍ಗೆ ಮೂಲ ಪ್ರಾಣಿಗಳಾಗಿವೆ. ಚೀನಾದ ವೂಹಾನ್ ಸಿಟಿಯಲ್ಲಿ ಡಿಸೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾದ ಈ ರೋಗವು ಇಂದು ವಿಶ್ವವ್ಯಾಪಿಯಾಗಿದೆ. ಕೊರೊನಾ ವೈರಸ್ ಅನಾದಿಕಾಲದಿಂದಲೇ ಇದೆ. ಆದರೆ ಕೊರೊನಾದಲ್ಲಿ ಬೇರೆ ಬೇರೆ ಪ್ರಬೇಧಗಳಿವೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ. ಸಾಂಪ್ರದಾಯಿಕ ಆಹಾರವನ್ನು ಸೇವಿಸದೆ ಹಾವು, ಬಾವಲಿ, ಮುಂಗುಸಿ, ಜಿರಳೆ, ಹಲ್ಲಿಗಳೇ ಮೊದಲಾದ ಪ್ರಾಣಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವೂದೂ ಇದಕ್ಕೆ ಕಾರಣವಾಗಿದೆ. ಈ ವೈರಸ್ ಶರೀರದಲ್ಲಿ ಸೇರಿಕೊಂಡು ಒಂದರಿಂದ 14 ದಿನಗಳಲ್ಲಿ ರೋಗವು ಕಾಣಿಸಿಕೊಳ್ಳುತ್ತದೆ. ಜ್ವರ, ಮೈಕೈನೋವು, ಕೆಮ್ಮು, ಆಯಾಸ, ನಿಶ್ಯಕ್ತಿ ಈ ರೋಗದ ಪ್ರಧಾನ ಲಕ್ಷಣಗಳಾಗಿವೆ. ಆರೋಗ್ಯವಂತ ವ್ಯಕ್ತಿಯಲ್ಲಿ ಕೇವಲ ಒಂದು ವಾರದಲ್ಲಿ ಈ ರೋಗವನ್ನು ತಡೆಗಟ್ಟಲು ಸಾಧ್ಯವಿದೆ. ರೋಗಪ್ರತಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದರು. ಗ್ರಾಮಪಂಚಾಯಿತಿ ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಶಬಾನಾ, ಸದಸ್ಯರುಗಳಾದ ಸಿರಾಜ್ ಮುಹಮ್ಮದ್, ಮುನೀರ್, ಕುಟುಂಬಶ್ರೀ ಸಿಡಿಎಸ್ ಸಂಚಾಲಕಿ ಸುಧಾ ಜಯರಾಂ, ಆರೋಗ್ಯ ಇಲಾಖೆಯ ದೇವಿಜಾಕ್ಷನ್, ಚಂದ್ರಹಾಸ ರೈ ಪೆರಡಾಲ, ಜಗನ್ನಾಥ ಶೆಟ್ಟಿ ಮಾತನಾಡಿದರು.

