ಬದಿಯಡ್ಕ: ಪ್ರತಿಭೆ ಅನಾವರಣಗೊಳ್ಳಲು ಅವಕಾಶಗಳು ಎಂದಿಗೂ ಸಾಗರದೋಪಾದಿಯಲ್ಲಿ ನಮ್ಮಿದಿರು ಬೋರ್ಗರೆಯುತ್ತಿರುತ್ತದೆ. ಆದರೆ ಅಂತಹ ಮೊರೆತಕ್ಕೆ ನಾವು ತೆರೆದುಕೊಳ್ಳಬೇಕು ಎನ್ನುವುದೂ ಮಹತ್ವದ ಅಂಶವೆ. ಜೊತೆಗೆ ಪ್ರತಿಯೊಬ್ಬರ ಪ್ರತಿಭೆಗೆ ಇಂತಹ ಅವಕಾಶಗಳು ಎದುರಾಗುತ್ತಲೇ ಇರುತ್ತದೆ.
ಜಗತ್ತಿಗೆ ಬಂದೊದಗಿದ ಮಹಾ ವಿಪತ್ತು ಕೊರೊನಾ ಒಂದೆಡೆ ನಮ್ಮನ್ನು ತೀವ್ರ ಆತಂಕಗೊಳಿಸುವ ಮಧ್ಯೆ ಪ್ರತಿಭೆಯ ಮೂಲಕ ಜಾಗೃತ ಸಮಾಜವನ್ನು ಹೇಗೆ ಮುನ್ನಡೆಸಬಹುದು ಎನ್ನುವುದಕ್ಕೆ ಇಲ್ಲೊಂದು ಮಾದರಿ ಚಟುವಟಿಕೆ ಗಮನ ಸೆಳೆದಿದೆ.
ಕೋವಿಡ್ 19 ನಿಗ್ರಹಕ್ಕಾಗಿ ಸಾಮಾಜಿಕ ಅಂತರ ಪಾಲಿಸಬೇಕೆಂಬುದು ಸರ್ಕಾರದ ನಿಬಂಧನೆ. ಇದೀಗ ಈ ನಿಯಮಗಳನ್ನು ಯಥಾವತ್ ಪಾಲಿಸಿ ಕೋರೊನ ಜಾಗೃತಿ ಮೂಡಿಸಿದ ವಿಡಿಯೋವೊಂದು ನಾಡಿನಾದ್ಯಂತ ವೈರಲಾಗುತ್ತಾ ಜನ ಮೆಚ್ಚುಗೆ ಪಡೆಯುತ್ತಿದೆ.
ಇಂತಹ ಒಂದು ವಿನೂತನ ಪ್ರಯೋಗ ಮಾಡಿರುವ ಕೋರೊನಾ ಜಾಗೃತಿಯ ಹಾಡೊಂದು ಕಾಸರಗೋಡು ಕನ್ನಡಿಗರಿಂದ ರಚಿತವಾಗಿದೆ. ಈ ಏಕ ಸಾಹಿತ್ಯಕ್ಕೆ ಏಳು ಜನ ಗಾಯಕರು ಏಕ ಕಾಲಕ್ಕೆ ತಮ್ಮ ತಮ್ಮಮನೆಯಲ್ಲಿಯೇ ಇದ್ದುಕೊಂಡು ಹಾಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವುದು ವಿಶೇಷತೆಯಾಗಿದೆ.
ಸಾಮಾಜಿಕ ಅಂತರ ಪಾಲಿಸಲು ಸರಕಾರದ ನಿಬಂಧನೆಯನ್ನು ಈ ರೀತಿಯಲ್ಲಿ ಕೂಡ ಬಳಸಿಕೊಂಡು ಜನರ ನಡುವೆ ಸಂಗೀತಮಯವಾದ ಜಾಗೃತಿ ಮೂಡಿಸಬಹುದೆನ್ನುವುದಕ್ಕೆ ಇದೊಂದು ಉದಾಹರಣೆ ಆಗಿದೆ.
ಶಿಕ್ಷಕಿಯಾಗಿರುವ ಅಕ್ಷಿತಾ ಎಂ ಮಾಯಿಪ್ಪಾಡಿ ರಚಿಸಿದ ಸಾಹಿತ್ಯದ ಪ್ರತಿ ಸಾಲುಗಳು ಕೋರೊನಾ ಹೋರಾಟಕ್ಕೆ ಸ್ಪೂರ್ತಿಯನ್ನು ನೀಡುತ್ತದೆ. ಸ್ವತಃ ಕವಯತ್ರಿಯಾಗಿರುವ ಅಕ್ಷಿತಾ ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಸಕ್ರಿಯ ಸದಸ್ಯೆಯಾಗಿದ್ದಾರೆ. ಉತ್ತಮ ಗಾಯಕಿ ಹಾಗೂ ಚಿತ್ರ ರಚನೆಯಲ್ಲೂ ಸೈ ಎನಿಸಿದ್ದಾರೆ.
ಅಕ್ಷಿತಾ ರಚಿಸಿದ ಕೋರೋನಾ ಜಾಗೃತಿಯ ಹಾಡನ್ನು ಕಾಸರಗೋಡಿನ ಮೇದಸ್ವಿ ಮೇಲೊಡಿಸ್ ತಂಡದ ಉದಯ ಕುಮಾರ್ ಆಚಾರ್ಯ ಕಾರ್ಳೆ, ರಾಜು ಆಚಾರ್ಯ ಮಂಗಳೂರು, ಬಬಿತಾ ರವಿ ಆಚಾರ್ಯ ಕಾಸರಗೋಡು,ದೀಪಿಕಾ ನಿತಿನ್ ಆಚಾರ್ಯ ಬೆಂಗಳೂರು,ಅಕ್ಷಿತಾ ಆಚಾರ್ಯ ಮಾಯಿಪ್ಪಾಡಿ,ಮಿಥಲ್ ಆಚಾರ್ಯ, ಲೋಹಿತ್ ಆಚಾರ್ಯ ಅಣಂಗೂರು ಹಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ.ಇದಕ್ಕೆ ಉತ್ತಮ ಮೆಚ್ಚುಗೆಗಳು ಮೂಡಿ ಬಂದಿದೆ.



