HEALTH TIPS

ಮುಂಬೈ ರೈಲು ಸ್ಫೋಟ: ಎಸ್‌ಐಟಿಯಿಂದ ಮರು ತನಿಖೆಗೆ ಆಗ್ರಹ

ಮುಂಬೈ: 'ಮುಂಬೈನ ಲೋಕಲ್‌ ರೈಲುಗಳಲ್ಲಿ 2006ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ, ಪ್ರಕರಣದ ಮರು ತನಿಖೆ ನಡೆಸಬೇಕು' ಎಂದು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, 2015ರಲ್ಲಿ ಖುಲಾಸೆಗೊಂಡಿರುವ ಅಬ್ದುಲ್‌ ವಾಹಿದ್‌ ಶೇಖ್‌ ಆಗ್ರಹಿಸಿದ್ದಾರೆ.

2006ರ ಜುಲೈ 11ರಂದು ಮುಂಬೈನ ಸ್ಥಳೀಯ ರೈಲುಗಳನ್ನು ಗುರಿಯಾಗಿಸಿ 7 ಕಡೆ ಸ್ಫೋಟ ನಡೆದಿತ್ತು. ಈ ದಾಳಿಯಲ್ಲಿ 180ಕ್ಕೂ ಹೆಚ್ಚು ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್‌ ವಾಹಿದ್‌ ಶೇಖ್‌ ಸೇರಿ 13 ಮಂದಿಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್‌) ಬಂಧಿಸಿತ್ತು.

9 ವರ್ಷಗಳ ಬಳಿಕ, ವಿಚಾರಣಾ ನ್ಯಾಯಾಲಯ ಶೇಖ್‌ ಅವರನ್ನು ಖುಲಾಸೆಗೊಳಿಸಿತ್ತು. ಉಳಿದ 12 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಬಾಂಬೆ ಹೈಕೋರ್ಟ್‌ ಜುಲೈ 21ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ, ಈ ಪ್ರಕರಣ ಬಗ್ಗೆ ಎಸ್‌ಐಟಿಯಿಂದ ಮರು ತನಿಖೆ ನಡೆಸಬೇಕು. ಪ್ರಕರಣದ ಹಿಂದಿನ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಶೇಖ್‌ ಒತ್ತಾಯಿಸಿದ್ದಾರೆ.

'ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಂಪೂರ್ಣವಾಗಿ ವಿಫಲವಾಗಿದೆ' ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿಲ್‌ ಕಿಲೊರ್‌ ಹಾಗೂ ಶ್ಯಾಮ್‌ ಚಾಂದಕ್‌ ನೇತೃತ್ವದ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ. 12 ಮಂದಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಜತೆಯಲ್ಲೇ, ಈ ಆರೋಪಿಗಳಿಗೆ 'ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ' ಚಿತ್ರಹಿಂಸೆ ನೀಡಲಾಗಿತ್ತು' ಎಂಬ ಅಂಶವನ್ನೂ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಶಿಕ್ಷಕರಾಗಿದ್ದ ಶೇಖ್‌, ಎಟಿಎಸ್‌ ನೀಡಿದ ಚಿತ್ರಹಿಂಸೆಯನ್ನು ಅಕ್ಷರಕ್ಕಿಳಿಸಿ 'ಬೇಗುನಾಹ್‌ ಕೈದಿ' ಎಂಬ ಪುಸ್ತಕ ಬರೆದಿದ್ದಾರೆ. 'ಹಾದಿ ತಪ್ಪಿದ ತನಿಖೆಗಾಗಿ 'ಎಟಿಎಸ್‌' ಕ್ಷಮೆಯಾಚಿಸಬೇಕು. 19 ವರ್ಷ ಜೈಲು ಶಿಕ್ಷೆ ಅನುಭವಿಸಿ ಖುಲಾಸೆಗೊಂಡಿರುವ 12 ಮಂದಿ ನಿರಾಪರಾಧಿಗಳಿಗೆ ಸರ್ಕಾರಿ ಉದ್ಯೋಗ, ಮನೆ ಸೇರಿ ₹19 ಕೋಟಿ ಪರಿಹಾರ ಕಲ್ಪಿಸಬೇಕು' ಎಂದು ವಾಹಿದ್‌ ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries