ಕಾಸರಗೋಡು: ದೋಣಿ ಸ್ಪರ್ಧೆಯು ಕೇರಳದ ಏಕತೆ ಮತ್ತು ಸಹೋದರತ್ವದ ಸಂಕೇತವಾಗಿದೆ ಎಂದು ರಾಜ್ಯ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ತಿಳಿಸಿದ್ದಾರೆ. ಅವರು ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ, ನೀಲೇಶ್ವರ ಅಚ್ಚಾಂತುರ್ತಿಯ ಕೊಟ್ಟಪುರಂ ತೇಜಸ್ವಿನಿ ಹೊಳೆಯಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ಸ್ ಬೋಟ್ ಲೀಗ್ ದೋಣಿ ಸ್ಪರ್ಧೆಯನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚಾಂಪಿಯನ್ಸ್ ಬೋಟ್ ಲೀಗ್‍ನ ಐದನೇ ಆವೃತ್ತಿಯ ಆರನೇ ಮತ್ತು ಕಾಸರಗೋಡು ಜಿಲ್ಲೆಯಲ್ಲಿನ ಮೊದಲ ಸ್ಪರ್ಧೆಯಾಗಿದೆ. ದಕ್ಷಿಣ ಕೇರಳದಲ್ಲಿ ಮಾತ್ರ ಸಕ್ರಿಯವಾಗಿದ್ದ ದೋಣಿ ಸ್ಪರ್ಧೆ, ಇದೇ ಮೊದಲ ಬಾರಿಗೆ ತೇಜಸ್ವಿನಿ ಹೊಳೆಯನ್ನು ಕೇಂದ್ರೀಕರಿಸಿರುವ ಉತ್ತರ ಮಲಬಾರ್ ಜಲ ಉತ್ಸವ ಆಯೋಜಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಚಾಂಪಿಯನ್ಸ್ ಬೋಟ್ ಲೀಗನ್ನು ಉತ್ತರ ಕೇರಳಕ್ಕೆ ವಿಸ್ತರಿಸಿದ ನಂತರ ಮಲಬಾರ್ ದೋಣಿ ಉತ್ಸವಗಳನ್ನು ಸಿಬಿಎಲ್ ಆಗಿ ಆಯೋಜಿಸಲು ಸಾಧ್ಯವಾಯಿತು ಎಂದು ಸಚಿವರು ತಿಳಿಸಿದರು.
ಶಾಸಕ ಎಂ. ರಾಜಗೋಪಾಲನ್ ಶಾಸಕಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಸಿರುನಿಶಾನಿ ತೋರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತ, ಚೆರುವತ್ತೂರು ಗ್ರಾ.ಪಂ.ಅಧ್ಯಕ್ಷೆ ಸಿ.ವಿ. ಪ್ರಮೀಳಾ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ತ್ರಿಸ್ತರ ಪಂಚಾಯಿತಿ ಪ್ರತಿನಿಧಿಗಳು, ಪ್ರವಾಸೋದ್ಯಮ ಜಂಟಿ ನಿರ್ದೇಶಕ ಅಭಿಲಾಷ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎ.ನಸೀಬ್, ಡಿಟಿಪಿಸಿ ಕಾರ್ಯದರ್ಶಿ ಜೆ.ಕೆ.ಜಿನೇಶ್ ಕುಮಾರ್ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 1.5 ಲಕ್ಷ, ದ್ವಿತೀಯ 1 ಲಕ್ಷ ರೂ. ಹಾಗೂ ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.


