HEALTH TIPS

ಭಾರತ-ಮಲೇಷ್ಯಾ: ಸೆಮಿಕಂಡಕ್ಟರ್‌ ಸೇರಿ 11 ಒಪ್ಪಂದಗಳಿಗೆ ಸಮ್ಮತಿ; ಪ್ರಧಾನಿ ಮೋದಿ

ಕ್ವಾಲಾಲಂಪುರ: ವ್ಯಾಪಾರ, ಹೂಡಿಕೆ, ರಕ್ಷಣೆ, ಇಂಧನ, ಉತ್ಪಾದನೆ ಮತ್ತು ಸೆಮಿಕಂಡಕ್ಟರ್‌ನಂತಹ ಆದ್ಯತಾ ವಲಯಗಳಲ್ಲಿನ ಸಂಬಂಧ ವಿಸ್ತರಿಸಲು ಭಾರತ ಮತ್ತು ಮಲೇಷ್ಯಾ ಭಾನುವಾರ ಒಪ್ಪಿಗೆ ಸೂಚಿಸಿವೆ.

ಸೆಮಿಕಂಡಕ್ಟರ್‌ ವಲಯ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಒಟ್ಟು 11 ಒಪ್ಪಂದಗಳು ಮತ್ತು ದಾಖಲೆಗಳಿಗೆ ಉಭಯ ದೇಶಗಳ ಪ್ರಧಾನಿ ಅವರು ಸಹಿ ಹಾಕಿದರು.

ಮಲೇಷ್ಯಾದ ಪ್ರಧಾನಿ ಅನ್ವರ್‌ ಇಬ್ರಾಹಿಂ ಅವರೊಂದಿಗಿನ ಮಾತುಕತೆ ನಂತರ, ಭಯೋತ್ಪಾದನೆಯನ್ನು ಎದುರಿಸುವ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದ ಮೋದಿ, 'ಭಯೋತ್ಪಾದನೆ ಬಗ್ಗೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಈ ವಿಷಯದಲ್ಲಿ ಯಾವುದೇ ದ್ವಿಮುಖ ನೀತಿಗಳಿಲ್ಲ, ರಾಜಿ ಇಲ್ಲ' ಎಂದು ಹೇಳಿದರು.

ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಸ್ಥಳೀಯ ಕರೆನ್ಸಿಗಳಾದ ಭಾರತೀಯ ರೂಪಾಯಿ ಮತ್ತು ಮಲೇಷ್ಯಾದ ರಿಂಗಿಟ್‌ ಬಳಕೆಯನ್ನು ಉತ್ತೇಜಿಸುವ ನಿರ್ಧಾರವನ್ನು ಮೋದಿ ಮತ್ತು ಇಬ್ರಾಹಿಂ ಅವರು ಪ್ರಕಟಿಸಿದರು.

'ಮಲೇಷ್ಯಾದಲ್ಲಿ ಭಾರತೀಯ ಕಾನ್ಸುಲೇಟ್‌ ಜನರಲ್‌ ಸ್ಥಾಪಿಸಲಾಗುವುದು. ಎಐ ಮತ್ತು ಡಿಜಿಟಲ್‌ ತಂತ್ರಜ್ಞಾನಗಳ ಜೊತೆಗೆ ಸೆಮಿಕಂಡಕ್ಟರ್‌ಗಳು, ಆರೋಗ್ಯ ಮತ್ತು ಆಹಾರ ಭದ್ರತಾ ವಲಯದ ಪಾಲುದಾರಿಕೆಯನ್ನು ಮುನ್ನಡೆಸುತ್ತೇವೆ' ಎಂದು ಮೋದಿ ತಿಳಿಸಿದರು.

'ಇಂಡೋ-ಪೆಸಿಫಿಕ್‌ ಪ್ರದೇಶವು ವಿಶ್ವದ ಬೆಳವಣಿಗೆಯ ಎಂಜಿನ್‌ ಆಗಿ ಹೊರಹೊಮ್ಮುತ್ತಿದೆ. ನಾವು, ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್‌) ಜೊತೆಗೆ, ಇಂಡೋ-ಪೆಸಿಫಿಕ್‌ ಪ್ರದೇಶದಾದ್ಯಂತ ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಗೆ ಬದ್ಧರಾಗಿದ್ದೇವೆ' ಎಂದು ಹೇಳಿದರು.‌

ಪ್ರಮುಖ ನಿರ್ಧಾರಗಳು...

* ಗುಪ್ತಚರ ಮಾಹಿತಿ ಹಂಚಿಕೆ, ಕಡಲ ಭದ್ರತೆ, ರಕ್ಷಣಾ ಸಂಬಂಧ ವೃದ್ಧಿಗೆ ಒತ್ತು

* ಭಯೋತ್ಪಾದನೆಗೆ ಖಂಡನೆ; ಶೂನ್ಯ ಸಹಿಷ್ಣುತೆಗೆ ಕರೆ

* ಭಯೋತ್ಪಾದನೆ ಎದುರಿಸಲು ಸಂಘಟಿತ ಜಾಗತಿಕ ಪ್ರಯತ್ನ ಅಗತ್ಯ

* ಮೂಲಭೂತವಾದ, ಹಿಂಸಾತ್ಮಕ ಉಗ್ರವಾದ ಎದುರಿಸಲು ಉಭಯ ದೇಶಗಳು ಬದ್ಧ

 ಕ್ವಾಲಾಲಂಪುರದಲ್ಲಿ ನಡೆದ ಭಾರತೀಯ ಸಮುದಾಯದವರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಂಜರಿಯನ್ನು ಬಾರಿಸಿದರು. ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಪಾಲ್ಗೊಂಡಿದ್ದರು -ಪಿಟಿಐ ಚಿತ್ರ

ಭಾರತ ಮೂಲದ ನಾಯಕರ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮೂಲದ ಸಚಿವರು ಸಂಸದರು ಮತ್ತು ಸೆನೆಟರ್‌ಗಳನ್ನು ಭಾನುವಾರ ಭೇಟಿ ಮಾಡಿದರು.

ಸಚಿವರಾದ ತುವಾನ್‌ ಗೋಬಿಂದ್‌ ಸಿಂಗ್‌ ದೇವ್‌, ರಮಣನ್‌ ರಾಮಕೃಷ್ಣನ್‌, ಎಂ. ಕುಲಶೇಖರನ್‌ , ಆರ್‌. ಯುನೇಶ್ವರನ್‌ ಸೇರಿದಂತೆ ಹಲವು ಭಾರತ ಮೂಲದ ವ್ಯಕ್ತಿಗಳೊಂದಿಗೆ (ಪಿಐಒ) ಸಂವಾದ ನಡೆಸಿದರು. 'ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಪಿಐಒಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯವಾದದ್ದು.

ಭಾರತದೊಂದಿಗೆ ಅವರ ಆಳವಾದ ಭಾವನಾತ್ಮಕ ಸಂಪರ್ಕವು ಸ್ಪಷ್ಟವಾಗಿ ಗೋಚರಿಸುತ್ತಿತ್ತು' ಎಂದು ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕಾನ್ಸುಲೇಟ್‌ ಕಚೇರಿ ಮತ್ತು ಮಲಯ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್‌ ಕೇಂದ್ರ ಸ್ಥಾಪನೆ ಕುರಿತ ಮೋದಿ ಅವರ ನಿರ್ಧಾರದ ಬಗ್ಗೆ ಪಿಐಒ ನಾಯಕರು ಶ್ಲಾಘಿಸಿದ್ದಾರೆ.

ನಿವೃತ್ತ ಯೋಧರ ಭೇಟಿ ಮಾಡಿದ ಪ್ರಧಾನಿ

ಕ್ವಾಲಾಲಂಪುರದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್‌ ಹಿಂದ್‌ ಫೌಜ್‌) ನಿವೃತ್ತ ಯೋಧ ಜಯರಾಜ್‌ ರಾಜಾ ರಾವ್‌ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. 'ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮತ್ತು ಐಎನ್‌ಎಯ ಧೈರ್ಯಶಾಲಿ ಯೋಧರಿಗೆ ನಾವು ಎಂದೆಂದಿಗೂ ಋಣಿಯಾಗಿರುತ್ತೇವೆ.

ಅವರ ಶೌರ್ಯವು ಭಾರತದ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿತ್ತು' ಎಂದು ಮೋದಿ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 'ಐಎನ್‌ಎಯ ಅನುಭವಿ ರಾವ್‌ ಅವರ ಭೇಟಿ ತುಂಬಾ ವಿಶೇಷವಾಗಿತ್ತು. ಅವರ ಜೀವನವು ಅಪಾರ ಧೈರ್ಯ ಮತ್ತು ತ್ಯಾಗದಿಂದ ಗುರುತಿಸಲ್ಪಟ್ಟಿದೆ. ಅವರ ಅನುಭವಗಳನ್ನು ಕೇಳುವುದು ತುಂಬಾ ಸ್ಪೂರ್ತಿದಾಯಕವಾಗಿತ್ತು' ಎಂದು ಹೇಳಿದ್ದಾರೆ.

1943ರ ಸೆಪ್ಟೆಂಬರ್‌ನಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಕ್ವಾಲಾಲಂಪುರದ ಸೆಲಂಗೋರ್‌ ಪಾದಂಗ್‌ನಲ್ಲಿ (ಈಗಿನ ಸ್ವಾತಂತ್ರ್ಯ ಚೌಕ) ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದ್ದರು. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಹಲವಾರು ಯುವಕರನ್ನು ಪ್ರೇರೇಪಿಸಿತ್ತು.

- 'ಎಂಜಿಆರ್‌ ಅಭಿಮಾನಿ ಅನ್ವರ್‌ ಇಬ್ರಾಹಿಂ'

'ಭಾರತ ಮತ್ತು ಮಲೇಷ್ಯಾ ದೇಶಗಳು ತಮಿಳು ಭಾಷೆಯ ಮೇಲಿನ ಪ್ರೀತಿಯಿಂದ ಪರಸ್ಪರ ಬೆಸೆದುಕೊಂಡಿವೆ. ಮಲೇಷ್ಯಾದ ಶಿಕ್ಷಣ ಮಾಧ್ಯಮ ಮತ್ತು ಸಾಂಸ್ಕೃತಿಕ ಜೀವನದಲ್ಲಿ ತಮಿಳು ಭಾಷೆ ಪ್ರಬಲವಾಗಿ ಬೇರೂರಿದೆ. ಭಾರತೀಯ ಮೂಲದ ಸುಮಾರು 30 ಲಕ್ಷ ಮಂದಿ ನೆಲಸಿದ್ದು ಬಹುಪಾಲು ತಮಿಳು ಮೂಲದವರಾಗಿದ್ದಾರೆ' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

'ಮಲೇಷ್ಯಾದ ಪ್ರಧಾನಿ ಅನ್ವರ್‌ ಇಬ್ರಾಹಿಂ ಅವರು ತಮಿಳಿನ ಮೇರುನಟ ಎಂ.ಜಿ. ರಾಮಚಂದ್ರನ್‌ ಅವರ ದೊಡ್ಡ ಅಭಿಮಾನಿ. ಅವರು ಆಯೋಜಿಸಿದ್ದ ಔತಣಕೂಟದ ಸಂದರ್ಭದಲ್ಲಿ ಎಂಜಿಆರ್‌ ನಟನೆಯ 'ನಾಲೈ ನಮಧೆ' ಚಿತ್ರದ ಹಾಡನ್ನು ಪ್ರಸ್ತುತಪಡಿಸಲಾಯಿತು' ಎಂದು ಮೋದಿ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 ಕ್ವಾಲಾಲಂಪುರದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ ನಿವೃತ್ತ ಯೋಧ ಜಯರಾಜ್‌ ರಾಜಾ ರಾವ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು -ಪಿಟಿಐ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries