ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚುತ್ತಿರುವ ನಡುವೆ ಫೆಬ್ರುವರಿ 28ರಿಂದ ಈವರೆಗೆ ಸುಮಾರು 2.44 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಧ್ಯಪ್ರಾಚ್ಯ ಸ್ಥಿತಿಗತಿ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಅರ್ ಮಹಾಜನ್, ಸಂಘರ್ಷದಲ್ಲಿ ಈವರೆಗೆ ಐವರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನಡೆದ ಘಟನೆಯಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ. ಒಮಾನ್‌ನಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲಾಗಿದ್ದು, ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ: ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಮಗೆ ಯಾರ ಸಹಾಯವೂ ಬೇಕಿಲ್ಲ; ನ್ಯಾಟೊ ಮಿತ್ರಪಡೆಗಳ ವಿರುದ್ಧ ಟ್ರಂಪ್ ಸಿಡಿಮಿಡಿ
ಇರಾನ್‌ನಿಂದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 650 ಭಾರತೀಯರು ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ದೇಶಗಳ ಗಡಿಯನ್ನು ದಾಟಿ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇರಾನ್‌ಗೆ ಹೋಗಿದ್ದ 284 ಯಾತ್ರಿಕರು ಅರ್ಮೇನಿಯಾ ದಾಟಿದ್ದು ಸ್ವದೇಶಕ್ಕೆ ಮರಳುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಭಾರತೀಯ ಪ್ರಜೆಗಳ ನೆರವಿಗಾಗಿ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ಈಗ ಇಮೇಲ್ ಹಾಗೂ ಕರೆಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಕ್ಸ್ ದೇಶಗಳ ನಿಲುವಿನ ಕುರಿತಾಗಿ ಕೇಳಿದಾಗ, ಬ್ರಿಕ್ಸ್‌ನಲ್ಲಿ ನಾವು ಅಧ್ಯಕ್ಷತೆಯನ್ನು ಹೊಂದಿದ್ದೇವೆ. ಸದಸ್ಯ ದೇಶಗಳೊಂದಿಗೆ ನಾವು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಿದ್ದಾರೆ.
ಇರಾನ್ ಕೂಡಾ ಭಾರತ, ರಷ್ಯಾ, ಬ್ರೆಜಿಲ್ ಹಾಗೂ ಚೀನಾ ಒಳಗೊಂಡಿರುವ ಬ್ರಿಕ್ಸ್‌ನ ಸದಸ್ಯ ರಾಷ್ಟ್ರವಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಭಾರತೀಯರ ರಕ್ಷಣೆ, ಯೋಗಕ್ಷೇಮಕ್ಕೆ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

