ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ 164 ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಶನಿವಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಅವರು ಪ್ರಸ್ತುತ ಆಯ್ಕೆಯಾಗಿರುವ ಕ್ಷೇತ್ರಗಳಿಂದಲೇ ಸ್ಪರ್ಧಿಸಲಿದ್ದಾರೆ.
ಸಚಿವ ಸಂಪುಟದಲ್ಲಿನ ಮೂವರನ್ನು ಹೊರತುಪಡಿಸಿ ಎಲ್ಲರಿಗೂ ಮತ್ತೆ ಟಿಕೆಟ್ ದೊರೆತಿದೆ. ಬಹುತೇಕ ಸಚಿವರು, ಶಾಸಕರು ಮತ್ತು ಹಿರಿಯ ನಾಯಕರು ಈ ಬಾರಿಯೂ ಟಿಕೆಟ್ ಪಡೆದಿದ್ದಾರೆ. 60 ಹೊಸಮುಖಗಳಿಗೂ ಡಿಎಂಕೆ ಮಣೆ ಹಾಕಿದೆ.
ಸ್ಟಾಲಿನ್ ಅವರು ಕೊಲತೂರು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಮತ್ತು ಉದಯನಿಧಿ ಅವರು ಚೆಪಾಕ್-ಟ್ರಿಪ್ಲಿಕೇನ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸಲಿದ್ದಾರೆ.
ಸಚಿವರಾದ ದುರೈ ಮುರುಗನ್(ಡಿಎಂಕೆ ಪ್ರಧಾನ ಕಾರ್ಯದರ್ಶಿ), ಕೆ.ಎನ್ ನೆಹ್ರೂ ಅನ್ಬಿಲ್ ಮಹೇಶ್ ಪೊಯ್ಯಮೊಳಿ, ತಂಗಂ ತೆನ್ನರಸು, ಎಂ.ಎ ಸುಬ್ರಮಣಿಯನ್ ಮತ್ತು ಇ.ವಿ ವೇಲು ಸೇರಿದಂತೆ ಬಹುತೇಕರಿಗೆ ಟಿಕೆಟ್ ದೊರೆತಿದೆ.
ಎಐಎಡಿಎಂಕೆಯಿಂದ ಉಚ್ಚಾಟಿತರಾಗಿ ಡಿಎಂಕೆ ಸೇರಿದ್ದ ಒ.ಪನ್ನೀರಸೆಲ್ವಂ ಅವರು ಬೊಡಿನಾಯಕ್ಕನೂರು ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಪನ್ನೀರಸೆಲ್ವಂ ಆಪ್ತರಾದ ಪೌಲ್ ಮನೋಜ್ ಪಾಂಡಿಯನ್ ಮತ್ತು ಆರ್. ವೈತಿಲಿಂಗಂ ಅವರಿಗೂ ಟಿಕೆಟ್ ದೊರಕಿದೆ.
ವಿಶೇಷವೆಂದರೆ, ಹಗರಣದ ಆರೋಪದಿಂದ ರಾಜೀನಾಮೆ ನೀಡಿದ್ದ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಎಐಎಡಿಎಂಕೆ ಭದ್ರಕೋಟೆಯಾಗಿರುವ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಅವರು ಈ ಹಿಂದೆ ಕರೂರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.
ಡಿಎಂಕೆ ಅಭ್ಯರ್ಥಿಗಳಲ್ಲಿ 29 ವಕೀಲರು, 17 ಎಂಜಿನಿಯರ್‌ಗಳು ಮತ್ತು 15 ವೈದ್ಯರು ಇದ್ದಾರೆ. 18 ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಮತ್ತು ಡಿಎಂಡಿಕೆ ಮತ್ತಿತರರನ್ನು ಒಳಗೊಂಡ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವು(ಎಸ್‌ಪಿಎ) ಡಿಎಂಕೆ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಮಿತ್ರ ಪಕ್ಷಗಳೊಂದಿಗೆ ಡಿಎಂಕೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ 28, ಡಿಎಂಡಿಕೆ 10, ವಿಸಿಕೆ 8, ಎಡಪಕ್ಷಗಳು ತಲಾ 5 ಮತ್ತು ಎಂಡಿಎಂಕೆ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷಗಳ 11 ಅಭ್ಯರ್ಥಿಗಳು ಕೂಡಾ ಡಿಎಂಕೆ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ.
ಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ'ಡಿಎಂಕೆಯಿಂದ ಟಿಕೆಟ್ ಪಡೆದಿರುವವರು ಕೇವಲ ಅಭ್ಯರ್ಥಿಗಳಲ್ಲ. ವಿಜಯಶಾಲಿ ಅಭ್ಯರ್ಥಿಗಳು. ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ.
ಪ್ರಮುಖ ಅಭ್ಯರ್ಥಿಗಳು:
ಸಿಎಂ ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಬೋಡಿನಾಯಕನೂರಿನಿಂದ ಪನ್ನೀರ್ ಸೆಲ್ವಂ, ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಸ್ಪರ್ಧಿಸಲಿದ್ದಾರೆ.
ಮೈತ್ರಿಕೂಟದ ಸೀಟು ಹಂಚಿಕೆ ವಿವರ:
ಕಾಂಗ್ರೆಸ್ (28 ಕ್ಷೇತ್ರಗಳು): ಒಪ್ಪಂದದ ಪ್ರಕಾರ, ಡಿಎಂಕೆಯ ಪ್ರಮುಖ ಮಿತ್ರ ಪಕ್ಷ ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅವುಗಳಲ್ಲಿ ಪೊನ್ನೇರಿ, ಈರೋಡ್ ಪೂರ್ವ, ವಿಲವಂಕೋಡ್, ಶಿವಕಾಶಿ ಮತ್ತು ಕಾರೈಕುಡಿ ಸೇರಿವೆ.
ಡಿಎಂಡಿಕೆ (10 ಕ್ಷೇತ್ರಗಳು): ಪ್ರೇಮಲತಾ ವಿಜಯಕಾಂತ್ ನೇತೃತ್ವದ ಡಿಎಂಡಿಕೆಗೆ 10 ಸ್ಥಾನಗಳನ್ನು ಹಂಚಿಕೆ ಮಾಡಿದ್ದು, ಅವುಗಳಲ್ಲಿ ವೃದ್ಧಾಚಲಂ ಮತ್ತು ಪಲ್ಲವರಂ ಸೇರಿವೆ.
ವಿಸಿಕೆ (08 ಸ್ಥಾನಗಳು): ತೋಲ್ ತಿರುಮಾವಳವನ್ ನೇತೃತ್ವದ ವಿಸಿಕೆ ಕಟ್ಟುಮನ್ನಾರ್ಕೋಯಿಲ್, ಪನ್ರುಟ್ಟಿ ಮತ್ತು ತಿಂಡಿವನಂ ಸೇರಿದಂತೆ 8 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಸಿಪಿಐ (ಎಂ) ಸಿಪಿಐ (ಸಿಪಿಐ): ತಲಾ 5 ಸ್ಥಾನಗಳು: ಸಿಪಿಐ (ಎಂ)ಗೆ ಹಂಚಿಕೆಯಾದ ಸ್ಥಾನಗಳಲ್ಲಿ ಪದ್ಮನಾಭಪುರಂ ಮತ್ತು ಪಳನಿ ಕ್ಷೇತ್ರಗಳು ಸೇರಿವೆ. ಥಲ್ಲಿ ಮತ್ತು ಭವಾನಿ ಸಾಗರ್ (ಎಸ್‌ಸಿ) ಕ್ಷೇತ್ರಗಳಿಂದ ಸಿಪಿಐ ಕಣಕ್ಕಿಳಿಯಲಿದೆ.
ಎಂಡಿಎಂಕೆ (04 ಸ್ಥಾನಗಳು): ವೈಕೋ ನೇತೃತ್ವದ ಎಂಡಿಎಂಕೆ ಪಕ್ಷವು ಮಧುರೈ ದಕ್ಷಿಣ ಸೇರಿದಂತೆ 4 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

