ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳು ದೇಶದ 70 ಕೋಟಿ ಮಹಿಳಾ ಸಮುದಾಯವನ್ನು ವಂಚಿಸಿರುವುದಲ್ಲದೆ, ಈ ಮೂಲಕ ಈ ಪಕ್ಷಗಳ ಮಹಿಳಾ ವಿರೋಧಿ ನೀತಿ ಬಯಲಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್ ಹೇಳಿದರು.
ಅವರು ಮಹಿಳಾ ಮೋರ್ಚಾ ಕಾಸರಗೋಡು ಮಂಡಲ ಸಮಿತಿವತಿಯಿಂದ ಆಯೋಜಿಸಲಾದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರೂ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಮಹಿಳಾ ಸಮುದಾಯ ಪ್ರತೀಕಾರದ ಹೊಡೆತ ನೀಡಲಿದೆ ಎಂದು ತಿಳಿಸಿದರು.
ಸಭೆಗೂ ಮೊದಲು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಪ್ರಾರಂಭಗೊಮಡ ಪ್ರತಿಭಟನಾ ಮೆರವಣಿಗೆ ಕರಂದಕ್ಕಾಡಿನಲ್ಲಿ ಸಂಪನ್ನಗೊಂಡಿತು. ನಂತರ, ಕಾಂಗ್ರೆಸ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ದಹಿಸಲಾಯಿತು. ಮಹಿಳಾ ಮೋರ್ಚಾದ ಪುಷ್ಪಲತಾ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಜಿಲ್ಲಾ ಕೋಶಾಧಿಕಾರಿ ಶ್ರೀಲತಾ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶಾನಬಾಗ್, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀವಿದ್ಯಾ, ಮಂಡಲ ಕಾರ್ಯದರ್ಶಿ ಚೇತನ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಮಧೂರು ಪಂಚಾಯಿತಿ ಪಶ್ಚಿಮ ಕ್ಷೇತ್ರ ಅಧ್ಯಕ್ಷೆ ಧನ್ಯ, ಅಶ್ವಿತಾ, ಪ್ರಮೀಳಾ ಉಪಸ್ಥಿತರಿದ್ದರು.



