ಕಾಸರಗೋಡು: 2026ರ ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಮೇ 4ರಂದು ನಡೆಯಲಿದೆ. ಮತ ಎಣಿಕೆ ಕಾರ್ಯದ ಸಿದ್ಧತೆ ಚುರುಕುಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಮತ ಎಣಿಕೆಗೆ ಜವಾಬ್ದಾರರಾಗಿರುವ ಅಧಿಕಾರಿಗಳ ಮೊದಲ ಹಂತದ ಯಾದೃಚ್ಛಿಕೀಕಣ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಯಾವ ಅಧಿಕಾರಿಗಳಿಗೆ ಮತ ಎಣಿಕೆಯ ಕಾರ್ಯವನ್ನು ನೀಡಲಾಗಿದೆ ಎಂಬುದನ್ನು 'ಆರ್ಡರ್' ಸಾಫ್ಟ್‍ವೇರ್ ಮೂಲಕ ತಿಳಿದುಕೊಳ್ಳಬಹುದು. ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿ ಇವಿಎಂ ಟೇಬಲ್‍ಗೆ 20 ಎಣಿಕೆ ಮೇಲ್ವಿಚಾರಕರು, 20 ಎಣಿಕೆ ಸಹಾಯಕರು ಮತ್ತು 20 ಮೈಕ್ರೋ ವೀಕ್ಷಕರು ಇರಲಿದ್ದಾರೆ. ಅಂಚೆ ಮತಪತ್ರದ ಟೇಬಲ್ ಕಾರ್ಯವನ್ನು ಸಹ ಪರಿಗಣಿಸಿದರೆ, ಜಿಲ್ಲೆಯಲ್ಲಿ ಒಟ್ಟು 540 ಅಧಿಕಾರಿಗಳು ಮತ ಎಣಿಕೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಎಲ್ಲಾ ಎಣಿಕೆ ಮೇಲ್ವಿಚಾರಕರು ಮತ್ತು ಅಂಚೆ ಮತಪತ್ರಗಳ ಮೇಜು ನಿರ್ವಹಿಸುವ ಎಣಿಕೆ ಸಹಾಯಕರು ಗೆಜೆಟೆಡ್ ಶ್ರೇಣಿಯವರಾಗಿದ್ದಾರೆ. ಸೂಕ್ಷ್ಮ ವೀಕ್ಷಕರು ಕೇಂದ್ರ ಸರ್ಕಾರಿ ನೌಕರರಾಗಿರುತ್ತಾರೆ.
ಅಧಿಕಾರಿಗಳನ್ನು ಎಣಿಕೆ ಕರ್ತವ್ಯಗಳಿಗೆ ಶೇ. 40 ಮೀಸಲಾತಿಯೊಂದಿಗೆ ನಿಯೋಜಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ 14 ಇವಿಎಂ ಟೇಬಲ್‍ಗಳು ಇರಲಿವೆ. ಮಂಜೇಶ್ವರ ಕ್ಷೇತ್ರದಲ್ಲಿ ನಾಲ್ಕು, ಕಾಸರಗೋಡು ಕ್ಷೇತ್ರದಲ್ಲಿ ಏಳು, ಉದುಮ ಕ್ಷೇತ್ರದಲ್ಲಿ ಒಂಬತ್ತು, ಕಾಞಂಗಾಡ್ ಕ್ಷೇತ್ರದಲ್ಲಿ 10 ಹಾಗೂ ತ್ರಿಕರಿಪುರ ಕ್ಷೇತ್ರದಲ್ಲಿ 12 ಅಂಚೆ ಮತಪತ್ರಗಳ ಟೇಬಲ್‍ಗಳನ್ನು ಸ್ಥಾಪಿಸಲಾಗುವುದು.
ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎರಡನೇ ಹಂತದ ಯಾದೃಚ್ಛಿಕೀಕಣ ಮೇ 2 ರಂದು ನಡೆಯಲಿದೆ. ಮೂರನೇ ಹಂತದ ಯಾದೃಚ್ಛಿಕೀಕರಣವು ಎಣಿಕೆ ಕೇಂದ್ರಗಳಲ್ಲಿ ಆಯಾ ಕ್ಷೇತ್ರ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಎಣಿಕೆ ದಿನವಾದ ಮೇ 4 ರಂದು ಬೆಳಿಗ್ಗೆ 5 ಗಂಟೆಗೆ ನಡೆಯಲಿದೆ. ಮೊದಲ ಮತ್ತು ಎರಡನೇ ಯಾದೃಚ್ಛಿಕೀಕರಣಕ್ಕೆ ಸಂಬಂಧಿಸಿದ ಕಾರ್ಯಗಳು ಆರ್ಡರ್ ಸಾಫ್ಟ್‍ವೇರ್ ಮೂಲಕ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಮೂರನೇ (ಅಂತಿಮ) ಹಂತದ ಯಾದೃಚ್ಛಿಕೀಕರಣದ ಮಾಹಿತಿಯನ್ನು ಮತ ಎಣಿಕೆ ಕೇಂದ್ರಗಳಲ್ಲಿ ಚುನಾವಣಾ ಅಧಿಕಾರಿಗಳಿಂದ ನೇರವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಜಿಲ್ಲಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಎಡಿಎಂಕೆ ಕೆ.ವಿ. ಶ್ರುತಿ, ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಜಿಲ್ಲಾ ಇನ್‍ಫಾರ್ಮೇಟಿಕ್ ಅಧಿಕಾರಿ ಕೆ. ಲೀನಾ ಮತ್ತು ಎಲ್ಲಾ ಐದು ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು ಭಾಗವಹಿಸಿದ್ದರು.



