ಕಾಸರಗೋಡು: ಅಂಜರಕಂಡಿ ನಿವಾಸಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್‍ರಾಜ್ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿ ಜಸ್ಟಿಸ್ ಫಾರ್ ನಿತಿನ್‍ರಾಜ್ ಆ್ಯಕ್ಷನ್ ಕೌನ್ಸಿಲ್ ಮತ್ತು ದಲಿತ್ ಆದಿವಾಸಿ (ಬುಡಕಟ್ಟು) ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ರಾಜ್ಯವ್ಯಾಪಿ ಹರತಾಳ ಆಚರಿಸಲಾಯಿತು.
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಹರತಾಳ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಜಿಲ್ಲೆಯ ಪಡನ್ನಕ್ಕಾಡು, ಬಂದಡ್ಕ, ಪೆರಿಯ ಎಂಬೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಇಂದು ಬೆಳಿಗ್ಗೆ ಬಸ್ ಸೇರಿದಂತೆ ವಾಹನಗಳನ್ನು ಹರತಾಳ ನಿರತರು ತಡೆಯೊಡ್ಡಿದ್ದಾರೆ. ಇದರಿಂದಾಗಿ ವಾಹನ ಚಾಲಕರು ಸರ್ವೀಸ್ ರಸ್ತೆ ಬದಲು ಮುಖ್ಯರಸ್ತೆ ಮೂಲಕ ಸಂಚಾರ ಆರಂಭಿಸಿದ್ದಾರೆ. ಉಳಿದಂತೆ ಅವಳಿ ತಾಲೂಕುಗಳಲ್ಲಿ ವಾಹನಗಳು ಎಂದಿನಂತೆ ಸಂಚಾರ ನಡೆಸಿದ್ದು, ವ್ಯಾಪಾರ ಸಂಸ್ಥೆಗಳು, ಕಚೇರಿಗಳು ಎಂದಿನಂತೆ ತೆರೆದು ಕಾರ್ಯಾಚರಿಸಿತ್ತು. ಹರತಾಳದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೆÇಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.
ರಾಜ್ಯದ ಒಟ್ಟು 52 ದಲಿತ ಸಂಘಟನೆಗಳ ಸಹಕಾರದೊಂದಿಗೆ ಬೆಳಗಗೆ 6ಕ್ಕೆ ಆರಂಭಗೊಂಡ ಹರತಾಳ ಸಂಜೆ 6ರ ವರೆಗೆ ನಡೆಯಿತು. ಹರತಾಳ ವೇಳೆ ವಾಹನಗಳನ್ನ ತಡೆಯಲಾಗುವುದಿಲ್ಲವೆಂದು ಹರತಾಳಕ್ಕೆ ಕರೆ ನೀಡಿದ ಸಂಘಟನೆಗಳು ತಿಳಿಸಿದ್ದರೂ ರಾಜ್ಯದ ಬಹುತೇಕ ಕಡೆ ಹರತಾಳ ಬೆಂಬಲಿಗರು ಬಸ್ ಸೇರಿದಂತೆ ಇತರ ವಾಹನಗಳನ್ನು ತಡೆಯೊಡ್ಡಿದ್ದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಗಿ ಬಂದಿತ್ತು. ರಾಜ್ಯದ ಕೆಲವೊಂದು ಕಡೆ ವ್ಯಾಪಾರ ಸಂಸ್ಥೆ ಮುಚ್ಚಿಕೊಂಡಿತ್ತು.

