ಆದರೆ, ನ್ಯಾಯಾಲಯವು ಕಾನೂನಿನ ಪ್ರಶ್ನೆಯನ್ನು ಮುಕ್ತವಾಗಿರಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜೋಯ್ ಮಲ್ಯ ಬಾಗ್ಚಿ ಮತ್ತು ನ್ಯಾ. ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಪಶ್ಚಿಮ ಬಂಗಾಳ ಅಧಿಕಾರಿಗಳ ವರ್ಗಾವಣೆಯಲ್ಲಿ ಮಧ್ಯಪ್ರವೇಶಿಸಲು ಮಾರ್ಚ್ 31ರಂದು ನಿರಾಕರಿಸಿದ್ದ ಕಲ್ಕತ್ತಾ ಹೈಕೋರ್ಟ್, ಚುನಾವಣಾ ಆಯೋಗ ವರ್ಗಾವಣೆ ಮಾಡಿರುವ ಅಧಿಕಾರಿಗಳ ಹುದ್ದೆಗಳನ್ನು ಈಗಾಗಲೇ ಇತರೆ ಅಧಿಕಾರಿಗಳು ವಹಿಸಿಕೊಂಡಿದ್ದಾರೆ ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು.
ಮಾರ್ಚ್ ತಿಂಗಳಲ್ಲಿ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತ ಮತ್ತಿತರರನ್ನು ವರ್ಗಾವಣೆಗೊಳಿಸಿತ್ತು.
ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ, ಇಂತಹ ಕ್ರಮಗಳು ಸಾಮಾನ್ಯವಾಗಿವೆ ಎಂದು ಅಭಿಪ್ರಾಯಪಟ್ಟಿತು.
ಆದರೆ, ರಾಜ್ಯ ಸರ್ಕಾರದೊಂದಿಗಿನ ಚುನಾವಣಾ ಆಯೋಗದ ಸಮಾಲೋಚನೆಯಲ್ಲಿ ಲೋಪದ ಕುರಿತು ಅರ್ಜಿದಾರರು ಎತ್ತಿರುವ ಕಾನೂನಿನ ಪ್ರಶ್ನೆಗೆ ಮಾನ್ಯತೆ ಇದೆ ಎಂದು ನ್ಯಾಯಪೀಠ ಹೇಳಿತು.
"ಅರ್ಜಿದಾರರು ಕಾನೂನಿನ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ, ನಾವೀಗ ಇದರಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಕಾನೂನಿನ ಪ್ರಶ್ನೆಗಳನ್ನು ಮುಕ್ತವಾಗಿಡಲಾಗಿದೆ" ಎಂದು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠ ಹೇಳಿತು.
ಚುನಾವಣಾ ಆಯೋಗದ ವರ್ಗಾವಣೆ ಪ್ರಕ್ರಿಯೆಯು ಪ್ರಜಾಪ್ರತಿನಿಧಿ ಕಾಯ್ದೆ, 1951ಕ್ಕೆ ಅನುಗುಣವಾಗಿಲ್ಲ ಹಾಗೂ ಕಾನೂನಿನ ಪ್ರಕಾರ, ಈ ಕುರಿತು ರಾಜ್ಯದೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಅರ್ಜಿದಾರ ಅರ್ಕಾ ಕುಮಾರ್ ನಾಗ್ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ವಾದಿಸಿದರು.
ಚುನಾವಣಾ ಆಯೋಗ ಶಾಸನಕ್ಕೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಕಾನೂನಿನ ಪ್ರಕಾರ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ ಎಂದೂ ಅವರು ವಾದಿಸಿದರು.
ಆಗ ಮಧ್ಯಪ್ರವೇಶಿಸಿದ ನ್ಯಾಯಪೀಠ, "ವರ್ಗಾವಣೆಗೊಳಿಸಲಾಗಿರುವ ಅಧಿಕಾರಿಗಳು ಪಶ್ಚಿಮ ಬಂಗಾಳ ಕೇಡರ್ ನವರು. ನೀವು ಹೇಗೆ ಪೂರ್ವಗ್ರಹಕ್ಕೊಳಗಾದಿರಿ?" ಎಂದು ವಕೀಲ ಕಲ್ಯಾಣ್ ಬ್ಯಾನರ್ಜಿಯನ್ನು ಪ್ರಶ್ನಿಸಿತು.
ನಾನು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದು, ಅವನ್ನು ಮುಂದೆ ನಿರ್ಧರಿಸಬಹುದು ಎಂದು ಕಲ್ಯಾಣ್ ಬ್ಯಾನರ್ಜಿ ಉತ್ತರಿಸಿದರು.
"ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ. ಯಾವ ಅಧಿಕಾರದ ಮೇಲೆ ಹೀಗೆ ಮಾಡಲಾಗಿದೆ? ಇದು ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿ ಆಗಿದೆ. ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿಯನ್ನು ವರ್ಗಾಯಿಸಲಾಗಿದೆ. ಯಾಕೆಂದರೆ, ಆಕೆ ಸಲಹೆಗಳನ್ನು ವಿರೋಧಿಸುತ್ತಿದ್ದರು ಎಂದು. ಇದು ವರ್ಗಾವಣೆ ಮಾಡಲು ನೆಲೆಯೇ?" ಎಂದು ಕಲ್ಯಾಣ್ ಬ್ಯಾನರ್ಜಿ ಪ್ರಶ್ನಿಸಿದರು.
ಆಗ, "ಎರಡು ಕಡೆ ವಿಶ್ವಾಸ ಕೊರತೆ ಇರುವುದರಿಂದ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಾಜ್ಯ ಅಧಿಕಾರಿಗಳಲ್ಲಿ ಚುನಾವಣಾ ಆಯೋಗಕ್ಕೆ ಭರವಸೆ ಇಲ್ಲ. ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗದಲ್ಲಿ ಭರವಸೆ ಇಲ್ಲ" ಎಂಬುದರತ್ತ ನ್ಯಾಯಪೀಠ ಬೊಟ್ಟು ಮಾಡಿತು.
"ನಾವು ಅದೊಂದು ಸಾಂವಿಧಾನಿಕ ಸಂಸ್ಥೆ ಎಂದು ತಿಳಿದಿದ್ದೇವೆ. ಒಂದು ವೇಳೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ನಾಳೆಯೇನಾದರೂ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಂಡರೆ, ಅದು ಶಾಸನದಲ್ಲಿ ಇಲ್ಲ ಎಂದು ನೀವು ಹೇಳುತ್ತೀರಾ?" ಎಂದು ಕಲ್ಯಾಣ್ ಬ್ಯಾನರ್ಜಿಯನ್ನು ನ್ಯಾಯಪೀಠ ಪ್ರಶ್ನಿಸಿತು.

