ನವದೆಹಲಿ: ಕೀಟ ನಿಯಂತ್ರಣ ವ್ಯವಸ್ಥೆಗಳಲ್ಲಿ ಕಂಡು ಬಂದ ಲೋಪದಿಂದಾಗಿ ಭಾರತದ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಳ್ಳುವುದನ್ನು ಜಪಾನ್ ನಿಲ್ಲಿಸಿದೆ.
ಪ್ರತಿ ರಫ್ತು ಹಂಗಾಮಿಗೂ ಮುನ್ನ ಜಪಾನ್ ತನ್ನ ಕ್ವಾರಂಟೈನ್ ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸುತ್ತದೆ. ಮಾವು ರಫ್ತು ಮಾಡಲು ಬಳಸಲಾಗುವ ವೇಪರ್ ಹೀಟ್ ಟ್ರೀಟ್‌ಮೆಂಟ್ (ವಿಎಚ್‌ಟಿ) ಸೌಲಭ್ಯಗಳನ್ನು ಈ ತಂಡ ಪರಿಶೀಲಿಸುತ್ತದೆ.
'ದಿ ಎಕನಾಮಿಕ್ ಟೈಮ್ಸ್' ವರದಿಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿ ಈ ಪರಿಶೀಲನೆಗಳನ್ನು ನಡೆಸಲಾಗಿತ್ತು. ಪರಿಶೀಲನೆಯ ಸಂದರ್ಭದಲ್ಲಿ ಜಪಾನ್ ಅಧಿಕಾರಿಗಳು ಫ್ಯೂಮಿಗೇಷನ್ ಪ್ರಕ್ರಿಯೆಗಳಲ್ಲಿ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿ ಮಾಡಿದೆ.
ವೇಪರ್ ಹೀಟ್ ಟ್ರೀಟ್‌ಮೆಂಟ್ ಎಂಬುದು ರಾಸಾಯನಿಕ ರಹಿತ ಪ್ರಕ್ರಿಯೆಯಾಗಿದ್ದು, ಇದು ಹಣ್ಣಿನ ಕೀಟಗಳನ್ನು ನಾಶಪಡಿಸಲು ಬಿಸಿ ಗಾಳಿಯನ್ನು ಹಾಯಿಸುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯ ನಂತರವೇ ಮಾವಿನ ಹಣ್ಣುಗಳನ್ನು ಅಂತರರಾಷ್ಟ್ರೀಯವಾಗಿ ಆಮದು ಮಾಡಿಕೊಳ್ಳಲು ಅನುಮತಿಸಲಾಗುತ್ತದೆ.
ಪರಿಶೀಲನೆಯ ನಂತರ ವರದಿ ಸಲ್ಲಿಸಿದ ತಂಡ, ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸುವಂತೆ ತಿಳಿಸಿದೆ.
ಜಪಾನ್ ಭಾರತದಿಂದ ಮಾವು ಆಮದನ್ನು ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲೇನಲ್ಲ.
1986ರಲ್ಲಿ, ಹಣ್ಣಿನ ನೊಣಗಳ ಬಾಧೆಯ ಆತಂಕದಿಂದಾಗಿ ಜಪಾನ್ ಮಾವಿನ ಹಣ್ಣುಗಳ ಆಮದನ್ನು ನಿಷೇಧಿಸಿತ್ತು. 2006ರಲ್ಲಿ ಮತ್ತೆ ಆಮದು ಪ್ರಕ್ರಿಯೆಯನ್ನು ಮುಂದುವರಿಸಿತ್ತು. ಇದೀಗ 20 ವರ್ಷಗಳ ನಂತರ ಮತ್ತೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.
ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮಾವು ಬೆಳೆಯುವ ದೇಶವಾಗಿದ್ದು, ವಾರ್ಷಿಕವಾಗಿ ಸುಮಾರು 26 ಮಿಲಿಯನ್ ಮೆಟ್ರಿಕ್ ಟನ್ ಮಾವಿನ ಹಣ್ಣನ್ನು ಬೆಳೆಯುತ್ತದೆ.

