HEALTH TIPS

ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ: ಶತ್ರು ರಾಷ್ಟ್ರಕ್ಕೆ ಭಾರತ ಖಡಕ್ ಸಂದೇಶ

 ನವದೆಹಲಿ: ಭಾರತ ಯಾವುದನ್ನೂ ಮರೆಯುವುದಿಲ್ಲ, ಭಾರತ ಯಾರನ್ನೂ ಕ್ಷಮಿಸುವುದಿಲ್ಲ ಎಂದು ಶತ್ರು ರಾಷ್ಟ್ರಕ್ಕೆ ಭಾರತೀಯ ಸೇನೆ ಸಂದೇಶವನ್ನು ರವಾನಿಸಿದೆ.


'ಆಪರೇಷನ್ ಸಿಂಧೂರ'ಗೆ ಒಂದು ವರ್ಷ ಪೂರ್ಣಗೊಂಡು ಇಂದಿಗೆ (ಗುರುವಾರ) ಒಂದು ವರ್ಷ ಕಳೆದಿದೆ. ಈ ಕ್ಷಣವನ್ನು ಸ್ಮರಿಸಿರುವ ಭಾರತೀಯ ವಾಯುಪಡೆಯು ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದೆ.

'ಆಪರೇಷನ್ ಸಿಂಧೂರ ನ್ಯಾಯ ಒದಗಿಸಿತು. ನಿಖರ ಕಾರ್ಯಾಚರಣೆ, ಶಾಶ್ವತ ಸ್ಮರಣೆ - ಆಪರೇಷನ್ ಸಿಂಧೂರ ಮುಂದುವರಿಯುತ್ತದೆ. ಭಾರತ ಯಾವುದನ್ನೂ ಮರೆಯುವುದಿಲ್ಲ. ಭಾರತ ಯಾರನ್ನು ಕ್ಷಮಿಸುವುದಿಲ್ಲ' ಎಂಬ ಶೀರ್ಷಿಕೆಯಡಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕಿನೊಂದಿಗೆ ವಿಡಿಯೊ ಆರಂಭವಾಗಿ, 'ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸಿ, ಪತ್ತೆಹಚ್ಚಿ ಶಿಕ್ಷಿಸುತ್ತದೆ' ಎಂಬ ಎಚ್ಚರಿಕೆಯ ಮಾತುಗಳು ಅದರಲ್ಲಿವೆ.

ಪಹಲ್ಗಾಮ್ ದಾಳಿಗೆ ದಿಟ್ಟ ಉತ್ತರ

ಕಳೆದ ವರ್ಷ ಏಪ್ರಿಲ್ 22ರಂದು ಪ್ರವಾಸಕ್ಕೆಂದು ಪಹಲ್ಗಾಮ್‌ಗೆ ತೆರಳಿದ್ದ ಭಾರತದ ವಿವಿಧ ಪ್ರದೇಶಗಳಿಂದ ಬಂದಿದ್ದ 26 ಅಮಾಯಕರು ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಮೇ 7ರಂದು ಭಾರತವು 'ಆಪರೇಷನ್ ಸಿಂಧೂರ' ಎಂಬ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ವಾಯುದಾಳಿ ನಡೆಸುವ ಮೂಲಕ ಕನಿಷ್ಠ 100 ಉಗ್ರರನ್ನು ಸದೆಬಡಿಯಲಾಗಿತ್ತು.

ಬಹವಾಲ್‌ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ, ಲಷ್ಕರ್-ಎ-ತೈಬಾ ನೆಲೆ ಸೇರಿದಂತೆ ಸಿಯಾಲ್ಕೋಟ್‌ನ ಮೆಹ್ಮೂನಾ ಜೋಯಾ, ಮುಜಾಫರಾಬಾದ್‌ನ ಸವಾಯಿ ನಾಲಾ ಮತ್ತು ಸೈಯದ್ ನಾ ಬಿಲಾಲ್, ಕೋಟ್ಲಿಯ ಗುಲ್ಪುರ್ ಮತ್ತು ಅಬ್ಬಾಸ್, ಭಿಂಬರ್‌ನ ಬರ್ನಾಲಾ ಮತ್ತು ಸರ್ಜಾಲ್‌ನಲ್ಲಿರುವ ಉಗ್ರರ ಮೂಲಸೌಕರ್ಯಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿತ್ತು.

ಈ ಸಂಬಂಧ ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ 'ಒಂದು ವರ್ಷದ ಹಿಂದೆ ಇದೇ ದಿನ, ಆಪರೇಷನ್ ಸಿಂಧೂರ ಮೂಲಕ ನಮ್ಮ ಸಶಸ್ತ್ರ ಪಡೆಗಳು ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿದ್ದವು. ನಮ್ಮ ಜನರ ಮೇಲೆ ದಾಳಿ ನಡೆಸಿದವರಿಗೆ ನಮ್ಮ ಸೈನಿಕರು ಅಂದೇ ತಕ್ಕ ಪ್ರತ್ಯುತ್ತರ ನೀಡಿದ್ದರು. ಇಂದು ಪ್ರತಿಯೊಬ್ಬ ಭಾರತೀಯನೂ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದಾನೆ' ಎಂದು ಬರೆದುಕೊಂಡಿದ್ದಾರೆ.

ಶತ್ರುಗಳಿಗೆ ಎಚ್ಚರಿಕೆ ಸಂದೇಶ ನೀಡಿದ ಅಮಿತ್ ಶಾ

ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ಆಪರೇಷನ್ ಸಿಂಧೂರ ಭಾರತದ ಪಾಲಿಗೆ ಒಂದು ಐತಿಹಾಸಿಕ ಕಾರ್ಯಾಚರಣೆ. ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ದಾಳಿ ಸಾಮರ್ಥ್ಯವನ್ನು ಇದು ಶತ್ರುಗಳಿಗೆ ಸದಾ ನೆನಪಿಸುತ್ತಿರುತ್ತದೆ. ಪಹಲ್ಗಾಮ್‌ನಲ್ಲಿ ನಮ್ಮ ನಾಗರಿಕರ ಮೇಲೆ ದಾಳಿ ನಡೆಸಿ ಪ್ರತಿಯೊಂದು ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಲು, ನಮ್ಮ ಸೇನೆಯ ನಿಖರ ದಾಳಿ ಸಾಮರ್ಥ್ಯ, ಗುಪ್ತಚರ ಸಂಸ್ಥೆಗಳ ಚಾಣಾಕ್ಷತನ ಮತ್ತು ಸರ್ಕಾರದ ದೃಢವಾದ ರಾಜಕೀಯ ಇಚ್ಛಾಶಕ್ತಿ ಒಂದಾಗಿ ಎದ್ದು ನಿಂತ ದಿನವಿದು ಎಂದು ಇತಿಹಾಸವು ಇದನ್ನು ಸ್ಮರಿಸಲಿದೆ' ಎಂದರು.

'ಶತ್ರುಗಳು ಎಲ್ಲೇ ಅಡ‌ಗಿ ಕುಳಿತರೂ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಠಿಣ ಸಂದೇಶವನ್ನು ಈ ದಿನವು ಸಾರುತ್ತಲೇ ಇರುತ್ತದೆ. ಅವರು ಯಾವಾಗಲೂ ನಮ್ಮ ಕಣ್ಣಳತೆಯಲ್ಲೇ ಇರುತ್ತಾರೆ ಮತ್ತು ನಮ್ಮ ಸೇನೆಯ ಅಗ್ನಿಶಕ್ತಿಗೆ ಬಲಿಯಾಗುವುದು ನಿಶ್ಚಿತ. ಈ ಸಂದರ್ಭದಲ್ಲಿ, ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಶೌರ್ಯಕ್ಕೆ ನಾನು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries