ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರು ಗುರುವಾರ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರವಾಗಿ (ಡಿಪಿ) 'ಆಪರೇಷನ್ ಸಿಂಧೂರ' ಲೋಗೊವನ್ನು ಹಾಕಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಹಿರಿಯ ಸಚಿವರು ಆಪರೇಷನ್ ಸಿಂಧೂರದ ಲೋಗೊವನ್ನು ಡಿಪಿಯಾಗಿ ಬದಲಾಯಿಸಿಕೊಂಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದನೆ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ ಎಂಬ ನಿಖರ ದಾಳಿ ನಡೆಸಿತ್ತು. ಕಳೆದ ವರ್ಷ ಮೇ 7ರಂದು ಬೆಳಗಿನ ಜಾವ ಈ ದಾಳಿ ಮಾಡಿತ್ತು.
ಮೋದಿ ಕರೆ: ಗುರುವಾರ ಬೆಳಿಗ್ಗೆ ಆಪರೇಷನ್ ಸಿಂಧೂರ ಲೋಗೊ ಇರುವ ಪೋಸ್ಟರ್ ಹಂಚಿಕೊಂಡ ಪ್ರಧಾನಿ ಮೋದಿ, ಒಂದು ವರ್ಷದ ಹಿಂದೆ ನಮ್ಮ ಸಶಸ್ತ್ರ ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿ ನಮ್ಮ ಜನರ ಮೇಲೆ ದಾಳಿ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದವು. ನಮ್ಮ ಪಡೆಗಳ ಯಶಸ್ಸಿಗೆ ಗೌರವ ಸೂಚಿಸಲು ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಪ್ರೊಫೈಲ್ ಫೋಟೋವಾಗಿ ಹಾಕಿಕೊಳ್ಳೋಣ ಎಂದು ಜನತೆಗೆ ಮನವಿ ಮಾಡಿದ್ದರು.
ಆಪರೇಷನ್ ಸಿಂಧೂರ ನಮ್ಮ ದೇಶದ ಸಂಕಲ್ಪ ಮತ್ತು ಸನ್ನದ್ಧತೆಯ ಸಂಕೇತ. ಇದು ಆಧುನಿಕ ಮಿಲಿಟರಿ ಕಾರ್ಯಾಚರಣೆಗಳಿಗೆ ಹೊಸ ಮಾನದಂಡ ರೂಪಿಸಿದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪರಮಾಣು ಶಸ್ತ್ರ ಹೊಂದಿರುವ ನೆರೆಹೊರೆಯ ಈ ಎರಡು ರಾಷ್ಟ್ರಗಳ ನಡುವೆ ಸುಮಾರು 88 ಗಂಟೆಗಳ ಕಾಲ ದಾಳಿ ನಡೆದಿತ್ತು. ನಂತರ ಉಭಯ ದೇಶಗಳು ಕದನ ವಿರಾಮ ಘೋಷಣೆ ಮಾಡಿದ್ದವು. ಸೇನೆ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಆಪರೇಷನ್ ಸಿಂಧೂರ ಮುಂದುವರಿಯುತ್ತದೆ... ಎಂದು ಬರೆಯಲಾಗಿದ್ದು, ಭಾರತದ ವಿರುದ್ಧದ ಕೃತ್ಯಗಳಿಗೆ ಪ್ರತಿಕ್ರಿಯೆ ಖಚಿತ ಎಂಬ ಸಂದೇಶ ರವಾನಿಸಲಾಗಿದೆ.

