ಇಸ್ಲಾಮಾಬಾದ್: ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಯಾವುದೇ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ತಂತ್ರಜ್ಞಾನ ಹಾಗೂ ತನ್ನ ಮಿಲಿಟರಿ ಶಕ್ತಿಯನ್ನು ಇನ್ನಷ್ಟು ಬಲಪಡಿಸುವುದಾಗಿ ಪಾಕಿಸ್ತಾನ ಸೇನೆ ಗುರುವಾರ ಹೇಳಿದೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (2025ರ ಮೇ 7) ಪ್ರತಿಯಾಗಿ ಭಾರತ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, ಕನಿಷ್ಠ 100 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು.
ಇದಕ್ಕೆ ಪಾಕಿಸ್ತಾನ ತಿರುಗೇಟು ನೀಡಲು ಪ್ರಯತ್ನಿಸಿತ್ತಾದರೂ, ಹೆಚ್ಚಿನ ದಾಳಿಗಳನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಮೇ 10ರಂದು ಉಭಯ ದೇಶಗಳ ಸೇನಾ ಅಧಿಕಾರಿಗಳ ನಡುವಿನ ಮಾತುಕತೆಯ ನಂತರ ಸಂಘರ್ಷ ಕೊನೆಗೊಂಡಿತ್ತು.
ಕಳೆದ ವರ್ಷ ಭಾರತದ ಜೊತೆ ನಡೆದ 4 ದಿನಗಳ ಸಂಘರ್ಷವನ್ನು (ಮಾರ್ಕಾ-ಎ-ಹಕ್) ನೆನಪಿಸಿಕೊಂಡಿರುವ ಪಾಕ್ ಸೇನೆ, ಇದನ್ನು ದೇಶದ ಮಿಲಿಟರಿ ಇತಿಹಾಸದಲ್ಲಿ ಒಂದು 'ನಿರ್ಣಾಯಕ ಅಧ್ಯಾಯ' ಎಂದು ಕರೆದಿದೆ.
ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ಪ್ರಾದೇಶಿಕ ಭದ್ರತಾ ಪರಿಸರದ ಜೊತೆಗೆ ವಿರೋಧಿ ಪಡೆಗಳ ಆಕ್ರಮಣಕಾರಿ ಸಾಮರ್ಥ್ಯವನ್ನು ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಅರಿತಿವೆ. ರಾಷ್ಟ್ರವನ್ನು ರಕ್ಷಿಸುವ ಪಾಕಿಸ್ತಾನದ ಸಶಸ್ತ್ರ ಪಡೆಗಳ ಸಂಕಲ್ಪ ಮತ್ತು ಬದ್ಧತೆ ಅಚಲವಾಗಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಭವಿಷ್ಯದ ಸವಾಲುಗಳನ್ನು ಎದುರಿಸಲು ವೃತ್ತಿಪರತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಪ್ರಾಶಸ್ಯ್ತ ನೀಡಲಾಗುವುದು. ನಾವು ಎಂದಿಗಿಂತಲೂ ಈಗ ಹೆಚ್ಚು ಜಾಗರೂಕರಾಗಿದ್ದೇವೆ. ಮುಂದಿನ ದಿನಗಳಲ್ಲಿ ಎದುರಾಗುವ ಯಾವುದೇ ಯುದ್ಧ ಅಥವಾ ದಾಳಿಗೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದೆ.
ತಾಯ್ನಾಡಿನ ಮೇಲಾಗುವ ಯಾವುದೇ ಆಕ್ರಮಣಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಸಿದ್ಧರಾಗಿದ್ದೇವೆ. ಪಾಕಿಸ್ತಾನ ಶಾಂತಿಪ್ರಿಯ ದೇಶ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಸೇನೆ ಸಮರ್ಪಿತವಾಗಿವೆ ಎಂದು ಹೇಳಿಕೊಂಡಿದೆ.

