HEALTH TIPS

ಡಾಲರ್ ಎದುರು ರೂಪಾಯಿ 100ಕ್ಕೆ ಕುಸಿದರೂ ಆತಂಕ ಬೇಡ; ಅದು ಕೇವಲ ಒಂದು ಸಂಖ್ಯೆಯಷ್ಟೇ: ಪ್ರಧಾನಿ ಮೋದಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯೆ ಶಮಿಕಾ ರವಿ ಹೇಳಿಕೆ!

 ನವದೆಹಲಿ: ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 100ಕ್ಕೆ ಕುಸಿದರೂ ಅದನ್ನು ಆತಂಕದಿಂದ ನೋಡುವ ಅಗತ್ಯವಿಲ್ಲ. ರೂಪಾಯಿಗೆ ತನ್ನ ನೈಜ ಮೌಲ್ಯವನ್ನು ಕಂಡುಕೊಳ್ಳಲು ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಶಮಿಕಾ ರವಿ ಹೇಳಿದ್ದಾರೆ.


ಂಓI ಪಾಡ್‌ಕಾಸ್ಟ್‌ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಮಿಕಾ ರವಿ, ವಿನಿಮಯ ದರವನ್ನು ಮಾರುಕಟ್ಟೆಯ ಶಕ್ತಿಗಳೇ ನಿರ್ಧರಿಸಬೇಕು ಎಂದು ಪ್ರತಿಪಾದಿಸಿದ್ದಾರೆ. 'ಡಾಲರ್‌ಗೆ ರೂಪಾಯಿ ಮೌಲ್ಯ 100 ತಲುಪಿದರೆ ಏನಾಗುತ್ತದೆ? ಅದು ಕೇವಲ ಒಂದು ಸಂಖ್ಯೆಯಷ್ಟೇ. ವಿನಿಮಯ ದರವನ್ನು ಮಾರುಕಟ್ಟೆಯೇ ನಿರ್ಧರಿಸಬೇಕು' ಎಂದು ಹೇಳಿದ್ದಾರೆ.

ವಿನಿಮಯ ದರದ ಕಾರ್ಯವಿಧಾನವನ್ನು ಪ್ರೆಶರ್ ಕುಕ್ಕರ್‌ನ ಸುರಕ್ಷತಾ ಕವಾಟಕ್ಕೆ ಹೋಲಿಸಿರುವ ರವಿ, ಆರ್ಥಿಕತೆಯಲ್ಲಿ ಉಂಟಾಗುವ ಒತ್ತಡಗಳನ್ನು ಹೊರಹಾಕುವ ಸಾಧನವಾಗಿ ಕರೆನ್ಸಿಯ ಮೌಲ್ಯ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದ್ದಾರೆ. ರೂಪಾಯಿ ಮೌಲ್ಯವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಉಳಿಸಿಕೊಳ್ಳಲು ಸರಕಾರ ಅಥವಾ RBI ನಿರಂತರವಾಗಿ ಮಧ್ಯಪ್ರವೇಶಿಸಿದರೆ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಆರ್ಥಿಕತೆಯ ಮೇಲೆ ಇತರೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

'ಕರೆನ್ಸಿಯ ಮೌಲ್ಯವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದಕ್ಕಿಂತ, ಅದು ಸ್ವಾಭಾವಿಕವಾಗಿ ಹೊಂದಾಣಿಕೆಯಾಗಲು ಅವಕಾಶ ನೀಡುವುದು ಮುಖ್ಯ. ಇಲ್ಲವಾದರೆ ಹಣದುಬ್ಬರದ ಒತ್ತಡಗಳು ಸೇರಿದಂತೆ ಹಲವು ಪರಿಣಾಮಗಳು ಉಂಟಾಗಬಹುದು' ಎಂದು ಅವರು ಹೇಳಿದ್ದಾರೆ.

ಸರಕಾರವು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ರೂಪಾಯಿ ತನ್ನ ನೈಜ ಮೌಲ್ಯವನ್ನು ಕಂಡುಕೊಳ್ಳಲು ಅವಕಾಶ ನೀಡುವುದು ಆರ್ಥಿಕ ಸ್ಥಿರತೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ವೆಚ್ಚಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಅದರ ಪ್ರಮುಖ ಕಾರಣ ದೇಶೀಯ ಅಂಶಗಳಲ್ಲ; ಜಾಗತಿಕ ಪೂರೈಕೆ ಆಘಾತಗಳ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಈ ಒತ್ತಡಗಳನ್ನು ನಿರ್ವಹಿಸಲು ಭಾರತ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿವರಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆ ನಿಧಾನಗತಿಯಾಗುತ್ತಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಿರುವ ರವಿ, ದೇಶವು ಇನ್ನೂ ಹೆಚ್ಚಿನ ಬೆಳವಣಿಗೆಯ ಹಂತದಲ್ಲಿದ್ದು, ಪ್ರಸ್ತುತ ಸವಾಲುಗಳ ನಡುವೆಯೂ ಬೆಳವಣಿಗೆಯ ಪಥ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, 2026ರಲ್ಲಿ ರೂಪಾಯಿ ಏಷ್ಯಾದ ಅತ್ಯಂತ ದುರ್ಬಲ ಪ್ರದರ್ಶನ ನೀಡಿದ ಕರೆನ್ಸಿಗಳಲ್ಲಿ ಒಂದಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಆರಂಭವಾದ ಬಳಿಕ ರೂಪಾಯಿ ಮೌಲ್ಯವು ಸುಮಾರು ಶೇ 5.5ರಷ್ಟು ಕುಸಿದಿದೆ ಎಂದು ವರದಿಗಳು ತಿಳಿಸಿವೆ.

ಭಾರತ ತನ್ನ ಕಚ್ಚಾ ತೈಲ ಅಗತ್ಯಗಳ ಶೇ. 88ರಷ್ಟು ಹಾಗೂ ನೈಸರ್ಗಿಕ ಅನಿಲದ ಅರ್ಧದಷ್ಟು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಹಾರ್ಮುಝ್ ಜಲಸಂಧಿಯಲ್ಲಿ ಉಂಟಾಗಿರುವ ಅಡಚಣೆಗಳು ಇಂಧನ ಪೂರೈಕೆಯ ಮೇಲೂ ಪರಿಣಾಮ ಬೀರಿವೆ. ಜೂನ್ 5ರಂದು ಬೆಳಿಗ್ಗೆ 9.30ರ ವೇಳೆಗೆ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 95.6ರಷ್ಟಿತ್ತು.

ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳನ್ನೂ ರವಿ ಉಲ್ಲೇಖಿಸಿದ್ದಾರೆ. ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಉತ್ತೇಜಿಸುವುದು, ಅನಿವಾರ್ಯವಲ್ಲದ ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡುವುದು ಹಾಗೂ ಖಾದ್ಯ ತೈಲ ಬಳಕೆಯನ್ನು ನಿಯಂತ್ರಿಸುವಂತಹ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಪೂರೈಕೆ ಬಿಕ್ಕಟ್ಟಿನಿಂದ ಉಂಟಾಗುತ್ತಿರುವ ಹಣದುಬ್ಬರದ ಒತ್ತಡಗಳನ್ನು ತಗ್ಗಿಸುವ ಉದ್ದೇಶದಿಂದ ಈ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಶಮಿಕಾ ರವಿ ಅಭಿಪ್ರಾಯಪಟ್ಟಿದ್ದಾರೆ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries