ಅಗರ್ತಲಾ: 'ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಬಿಹಾರದಲ್ಲಿ ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಯನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ. ಒಳನುಸುಳುವಿಕೆ ತಡೆಯಲು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತೆ ಬಿಗಿಗೊಳಿಸಲಾಗುವುದು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ತ್ರಿಪುರಾದ ಲಂಕಮುರಾ ಗಡಿ ಠಾಣೆಯಲ್ಲಿ ಶುಕ್ರವಾರ ಬಿಎಸ್‌ಎಫ್ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಬಹುಹಂತದ ಭದ್ರತಾ ತಂತ್ರಜ್ಞಾನದ 'ಸ್ಮಾರ್ಟ್ ಗಡಿ ಯೋಜನೆ'ಯ (ಚತುರ್ಭುಜ ಭದ್ರತಾ ಗ್ರಿಡ್) ಅನುಷ್ಠಾನವು ಅಂತಿಮ ಹಂತದಲ್ಲಿದೆ. ದೇಶದ ಏಳೆಂಟು ಕಡೆಗಳಲ್ಲಿ ಸ್ಮಾರ್ಟ್ ಗಡಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಆ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ 6 ಸಾವಿರ ಕಿ.ಮೀ. ಗಡಿಯನ್ನು ಅಭೇದ್ಯವಾಗಿ ಇರಿಸಲಾಗುವುದು' ಎಂದರು.
'ಮಾನವ, ಶಸ್ತ್ರಾಸ್ತ್ರ, ಮಾದಕವಸ್ತು ಕಳ್ಳಸಾಗಾಣೆ ಸೇರಿದಂತೆ ದೇಶದ ಗಡಿಯಲ್ಲಿ ಹಲವು ಸಮಸ್ಯೆಗಳಿವೆ. ಆದರೆ, ಬಿಎಸ್‌ಎಫ್ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿ ಸಾಧಿಸಲು ನಾವು ದೇಶದ ಗಡಿಯನ್ನು 'ಮಾನವ, ಮಾದಕವಸ್ತು, ಖೋಟಾ ನೋಟು ಕಳ್ಳಸಾಗಣೆಯಿಂದ ಮುಕ್ತವಾಗಿಸಬೇಕು' ಎಂದರು.
'ಒಳನುಸುಳುವಿಕೆ ತಡೆಯುವುದು ಮಾತ್ರವಲ್ಲ, ದೇಶದೊಳಗೆ ಸೇರಿಕೊಂಡಿರುವ ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚಿ ಗಡಿಪಾರು ಮಾಡಲಾಗುವುದು. ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಬಿಎಸ್‌ಎಫ್‌ನ ಮಹಾನಿರ್ದೇಶಕರು ದೇಶದ ಗಡಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದೂ ಅಮಿತ್ ಶಾ ಹೇಳಿದರು.

