ನವದೆಹಲಿ: ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಲ್ಲಿ ಸಮಸ್ಯೆಗಳಿದ್ದರೆ, ಮೌಲ್ಯಮಾಪನದ ಬಗ್ಗೆ ತಕರಾರುಗಳಿದ್ದರೆ ಈ ಬಗ್ಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ಪೋರ್ಟಲ್ ಅನ್ನು ಸಿಬಿಎಸ್‌ಇ ಮಂಗಳವಾರ ತೆರೆದಿದೆ. ಪರಿಶೀಲನೆಗಾಗಿ ರೂಪಿಸಲಾದ ಈ ಪೋರ್ಟಲ್ ಮೇಲೆ ಸರಣಿ ಸೈಬರ್ ದಾಳಿ ನಡೆಸಲಾಗಿದೆ ಎಂದು ಸಿಬಿಎಸ್‌ಇ ದೂರು ನೀಡಿದೆ.
ಈ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪೋರ್ಟಲ್ ಮೇಲೆ ಕಳೆದ ಕೆಲವು ದಿನಗಳಿಂದ ನಿರಂತರ ಸೈಬರ್ ದಾಳಿ ನಡೆಯುತ್ತಿರುವ ಹಿನ್ನೆಲೆ ಮಂಡಳಿ, ದೆಹಲಿ ಪೊಲೀಸರ 'ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್' (ಐಎಫ್‌ಎಸ್‌ಒ) ಘಟಕಕ್ಕೆ ದೂರು ನೀಡಿದ್ದು, ಐಟಿ ಕಾಯ್ದೆಯ ಸೆಕ್ಷನ್ 66 ಮತ್ತು 43 (ಎಫ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪರಿಶೀಲನೆಗಾಗಿ ರೂಪಿಸಲಾದ ಪೋರ್ಟಲ್ ಮೇಲೆ ಸೈಬರ್ ದಾಳಿಯಾಗಿದೆ. ಎರಡು ನಿಮಿಷಗಳಲ್ಲಿ 15 ಲಕ್ಷ ಬಾರಿ ಪೋರ್ಟಲ್‌ಗೆ ಪ್ರವೇಶ ಪಡೆಯಲು ಯತ್ನಿಸಲಾಗಿದೆ ಮತ್ತು ಪೋರ್ಟಲ್‌ನಲ್ಲಿರುವ ಕಡತಗಳನ್ನು ಕದಿಯಲು 1 ಲಕ್ಷ ಬಾರಿ ಯತ್ನಿಸಲಾಗಿದೆ' ಎಂದು ಸಿಬಿಎಸ್‌ಇ ಈ ಹಿಂದೆ ಹೇಳಿತ್ತು.
ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಬಿಎಸ್‌ಇ ಈ ಮಾಹಿತಿ ನೀಡಿತ್ತು. 'ನಮ್ಮ ತಾಂತ್ರಿಕ ತಂಡವು ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದೆ. ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ ಬಳಿಕ ಇನ್ನಷ್ಟು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಎಂದೂ ತಿಳಿಸಿತ್ತು.
ಕಳೆದ ಮೂರು ದಿನಗಳಿಂದ ಪೋರ್ಟಲ್ ಪದೇ ಪದೇ ದಾಳಿಗೊಳಗಾಗಿದೆ. ಆದಾಗ್ಯೂ, ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಮಂಡಳಿ ಹೇಳಿದೆ.
12ನೇ ತರಗತಿಯ ಬೋರ್ಡ್ ಪರೀಕ್ಷೆ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಲ್ಲಿ ಸಮಸ್ಯೆಗಳಿದ್ದರೆ, ಮೌಲ್ಯಮಾಪನದ ಬಗ್ಗೆ ತಕರಾರುಗಳಿದ್ದರೆ ಈ ಬಗ್ಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ಪೋರ್ಟಲ್ ಅನ್ನು ಸಿಬಿಎಸ್‌ಇ ಜೂನ್ 2 ತೆರೆದಿದೆ. ಜೂನ್ 6 ಮಧ್ಯರಾತ್ರಿವರೆಗೆ ಇದು ಕಾರ್ಯನಿರ್ವಹಿಸಲಿದೆ. ಆ ನಂತರ ಬಂದ ಯಾವುದೇ ಅರ್ಜಿಯನ್ನೂ ಪರಿಗಣಿಸುವುದಿಲ್ಲ ಮತ್ತು ಸ್ಕ್ಯಾನ್ಡ್ ಪ್ರತಿಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರವೇ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿತ್ತು.
ಕಳೆದ ಮೂರು ದಿನಗಳಿಂದ ಈ ಪೋರ್ಟಲ್ ಮೇಲೆ ವ್ಯವಸ್ಥಿತ ಮತ್ತು ಸಂಘಟಿತ ಸೈಬರ್ ದಾಳಿಗಳು ನಡೆದಿವೆ. ಪೋರ್ಟಲ್ ಅನ್ನು ಸ್ಥಗಿತಗೊಳಿಸುವುದು, ವಿದ್ಯಾರ್ಥಿಗಳಿಗೆ ಅದರ ಪ್ರವೇಶವನ್ನು ನಿರಾಕರಿಸುವುದು ಮತ್ತು ಅನಧಿಕೃತವಾಗಿ ಮಾಹಿತಿಯನ್ನು ಕದಿಯುವುದು ಈ ದಾಳಿಯ ಉದ್ದೇಶವಾಗಿತ್ತು ಎಂದು ಶಂಕಿಸಲಾಗಿದೆ.
ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಡಿಜಿಟಲ್ ಇಂಡಿಯಾ ಕಾರ್ಪೊರೇಷನ್, ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4ಅ) ನಂತಹ ಪ್ರಮುಖ ಸೈಬರ್ ಭದ್ರತಾ ಸಂಸ್ಥೆಗಳ ಸಹಾಯದಿಂದ ಈ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ. ದತ್ತಾಂಶ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

