ಕೋಲ್ಕತ್ತ (PTI): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಬಿಜೆಪಿ ಶಾಸಕರಾದ ಸ್ವಪನ್ ದಾಸ್‌ಗುಪ್ತಾ, ತಪಸ್ ರಾಯ್ ಮತ್ತು ಶಂಕರ್ ಘೋಷ್ ಸೇರಿದಂತೆ 35 ಶಾಸಕರು ಸಚಿವರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ಇದರೊಂದಿಗೆ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಲ್ಲಿ ಸಚಿವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಭೌಗೋಳಿಕತೆ, ಲಿಂಗ ಪ್ರಾತಿನಿಧ್ಯ ಮತ್ತಿತರ ಅಂಶಗಳ ವಿಚಾರದಲ್ಲಿ ಅಳೆದೂ ತೂಗಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.
ಲೋಕಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಹಾಲಿ ಸಚಿವರು ಹಾಗೂ ರಾಜ್ಯದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
13 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ, 19 ಮಂದಿ ವಿವಿಧ ಮಂಡಳಿಗಳ ಸಚಿವರಾಗಿ ಪ್ರಮಾವಚನ ಸ್ವೀಕರಿಸಿದರು.

