ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿರುವ ಕೋಟ್ಯಂತರ ರೂಪಾಯಿ ದೇಣಿಗೆ ಹಣ ನಾಪತ್ತೆಯಾಗಿದೆ ಎಂಬ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಗಂಭೀರ ಆರೋಪಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
'ಯಾರಿಗಾದರೂ ಅನುಮಾನವಿದ್ದರೆ ಮುಕ್ತವಾಗಿ ತನಿಖೆ ನಡೆಸಲಿ, ನಮ್ಮ ಅಭ್ಯಂತರವಿಲ್ಲ' ಎಂದು ಸ್ಪಷ್ಟಪಡಿಸಿದೆ.
ರಾಮ ಮಂದಿರಕ್ಕೆ ಬಂದಿರುವ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಖಿಲೇಶ್ ಯಾದವ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ಅಲ್ಲದೆ, ಜಾಗತಿಕ ಸನಾತನ ಸಮುದಾಯದ ಆಳವಾದ ನಂಬಿಕೆಗೆ ಸಂಬಂಧಿಸಿದ ಈ ವಿಷಯದ ಕುರಿತು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಗಮನಹರಿಸಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದರು. ಸರ್ಕಾರದ ಮೌನವು ಶಂಕಾಸ್ಪದವಾಗಿದೆ ಎಂದೂ ಅವರು ವಾಗ್ದಾಳಿ ನಡೆಸಿದ್ದರು.
ಅಖಿಲೇಶ್ ಯಾದವ್ ಅವರ ಈ ಆರೋಪಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಮಹಂತ್ ದಿನೇಂದ್ರ ದಾಸ್ ಅವರು ತಿರುಗೇಟು ನೀಡಿದ್ದಾರೆ.
'ನನಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೇಲೆ ಸಂಪೂರ್ಣ ನಂಬಿಕೆಯಿದೆ. ಯಾರಾದರೂ ತಪ್ಪು ಮಾಡಿದ್ದರೆ, ಸ್ವತಃ ಆ ಪ್ರಭು ಶ್ರೀರಾಮನೇ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದಾನೆ. ನಮ್ಮ ಟ್ರಸ್ಟ್‌ನ ಯಾವುದೇ ಸದಸ್ಯರು ಇಂತಹ ತಪ್ಪು ಕೆಲಸದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಮಹಂತ್ ದಿನೇಂದ್ರ ದಾಸ್, ಈ ವಿಷಯದಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ಟ್ರಸ್ಟ್ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. 'ಈ ದೇಣಿಗೆ ವಿಚಾರದಲ್ಲಿ ಯಾರಿಗಾದರೂ ಏನಾದರೂ ಅನುಮಾನಗಳಿದ್ದರೆ, ಸರ್ಕಾರ ತಕ್ಷಣವೇ ತನಿಖೆ ನಡೆಸಲಿ. ನಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ' ಎಂದು ಹೇಳುವ ಮೂಲಕ ಅಖಿಲೇಶ್ ಯಾದವ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ.

