HEALTH TIPS

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ: ತಮಿಳುನಾಡಿನಲ್ಲಿ ರಾಜಕೀಯ ಸಮೀಕರಣ ಬದಲಾಗಲಿದೆಯೇ?

 ಚೆನ್ನೈ: ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಗುರಿ ದೊಡ್ಡದಾಗಿದ್ದು, ಎಲ್ಲರನ್ನು ಒಳಗೊಂಡಿರುವ ಅಜೆಂಡಾದೊಂದಿಗೆ ಹೊಸ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದಾರೆ.

ಇದರೊಂದಿಗೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. 


2021ರಿಂದ 2025ರವರೆಗೆ ಬಿಜೆಪಿ ಜ್ಯ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷದ ಭವಿಷ್ಯ ಅಣ್ಣಾಮಲೈ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಅವರು ಅಸಮಾಧಾನಗೊಂಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಘೋಷಿಸಿದ ಅಣ್ಣಾಮಲೈ ತನಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಅತ್ಯಂತ ಗೌರವಯುತವಾಗಿ ಪಕ್ಷವನ್ನು ತೊರೆದಿದ್ದೇನೆ ಎಂದು ತಿಳಿಸಿದ್ದಾರೆ.

ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬದ್ಧತೆಯನ್ನು ತಿಳಿಸಿರುವ ಅವರು, 'ಇಂದಿನಿಂದ ಹೊಸ ಹಾದಿ, ಹೊಸ ಚಳವಳಿ, ಹೊಸ ರಾಜಕೀಯ ಚಳವಳಿ' ಎಂದು ಘೋಷಿಸಿದ್ದಾರೆ.

ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದನ್ನು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅಂಗೀಕರಿಸಿದ್ದಾರೆ. ಅಣ್ಣಾಮಲೈ ಬೆಂಬಲಿಗರು ಇದನ್ನು ಸಂಭ್ರಮಿಸಿದರೆ ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಬಿಜೆಪಿ ಹೇಳಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ತಮ್ಮ ಕೆಲಸವನ್ನು ನೆನಪಿಸಿಕೊಂಡ ಅಣ್ಣಾಮಲೈ, ತಮಿಳುನಾಡಿನ ಗುರುತು, ಸಂಸ್ಕೃತಿ ಮತ್ತು ನೀರಿನ ಹಕ್ಕುಗಳು ಸೇರಿದಂತೆ ಯಾವುದೇ ಹಕ್ಕಿನಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಹೊಸ ಪಕ್ಷಕ್ಕೆ ನಾವು ನಾಯಕರು ಹಾಗೂ ಕಾರ್ಯಕರ್ತರನ್ನು ಕಟ್ಟಬೇಕಿದೆ. ಇದಕ್ಕಾಗಿ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅಣ್ಣಾಮಲೈ ಹಠಾತ್ ಆಗಿ ಪಕ್ಷ ತೊರೆದಿಲ್ಲ. ಸುಮಾರು 18 ತಿಂಗಳ ಕಾಲ ಪಕ್ಷದ ನಾಯಕತ್ವದೊಂದಿಗೆ ಭಿನ್ನಭಿಪ್ರಾಯದ ಕುರಿತು ಶಾಂತವಾಗಿ ಚರ್ಚಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ.

ಎಲ್ಲರನ್ನು ಒಳಗೊಂಡ ರಾಜಕಾರಣಕ್ಕೆ ಅಣ್ಣಾಮಲೈ ಒತ್ತು ನೀಡಿದ್ದು, ರಾಜ್ಯದ ಬೆಳವಣಿಗೆಗೆ ಎಲ್ಲರನ್ನು ಬಳಕೆ ಮಾಡಬೇಕು. ಪಂಥೀಯ ರಾಜಕಾರಣ ತೊರೆದು ಜನಸಾಮಾನ್ಯರ ರಾಜಕೀಯವನ್ನು ಬೆಳೆಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿ ಅಧ್ಯಕ್ಷರಾಗಿದ್ದಾಗ ಆಕ್ರಮಣಕಾರಿ ಶೈಲಿಯಲ್ಲಿ ಗುರುತುಸಿಕೊಂಡಿದ್ದ ಅಣ್ಣಾಮಲೈ ನಿರಂತರವಾಗಿ ಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದರು.

ಅಣ್ಣಾಮಲೈ ಅವರು ತಕ್ಷಣವೇ ಯಾವುದೇ ಹೊಸ ರಾಜಕೀಯ ಪಕ್ಷದ ಹೆಸರನ್ನು ಪ್ರಕಟಿಸಿಲ್ಲ. ಆದರೆ ರಾಜಕೀಯ ಅಭಿಯಾನವನ್ನು ಪ್ರಕಟಿಸಿದ್ದಾರೆ. ಈ ಚಳವಳಿಯು ಯಾವುದೇ ರಾಷ್ಟ್ರೀಯ ಪಕ್ಷದ ಹಂಗಿಲ್ಲದೆ, ಸಂಪೂರ್ಣವಾಗಿ ತಮಿಳುನಾಡಿನ ಯುವಕರು ಮತ್ತು ರೈತರನ್ನು ಕೇಂದ್ರೀಕರಿಸಿ ಕೆಲಸ ಮಾಡಲಿದೆ.

ದೆಹಲಿ ನಾಯಕರ ಆದೇಶದಂತೆ ಕೆಲಸ ಮಾಡುವ 'ಹೈಕಮಾಂಡ್ ಸಂಸ್ಕೃತಿ' ತಮಿಳುನಾಡಿನ ಮಣ್ಣಿಗೆ ಸರಿಹೊಂದುವುದಿಲ್ಲ. ಇನ್ನು ಮುಂದೆ ನನ್ನ ನಿರ್ಧಾರಗಳನ್ನು ತಮಿಳುನಾಡಿನ ಜನರೇ ನಿರ್ದೇಶಿಸುತ್ತಾರೆ ಎಂದು ಹೇಳುವ ಮೂಲಕ ಪ್ರಾದೇಶಿಕ ಭಾವನೆಯನ್ನು ಮುನ್ನೆಲೆಗೆ ತಂದಿದ್ದಾರೆ.

ದ್ರಾವಿಡ ಪಕ್ಷಗಳು, ಬಿಜೆಪಿ ಮೈತ್ರಿಗೆ ನೇರ ಸವಾಲು

ತಮಿಳುನಾಡಿನ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳ ವಿರುದ್ಧ ಅಣ್ಣಾಮಲೈ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ಏಕಕಾಲಕ್ಕೆ ಸಮರ ಘೋಷಿಸಿದ್ದಾರೆ. ಭ್ರಷ್ಟಾಚಾರದ ವಿಚಾರದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಕೂಡ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕತ್ವವು ಎಐಎಡಿಎಂಕೆ ಜೊತೆ ಮಾಡಿಕೊಂಡಿರುವ ಮೈತ್ರಿಯನ್ನು ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ. ಸ್ವಾರ್ಥಿ ನಾಯಕರನ್ನು ಉಳಿಸಲು ಮಾಡಿಕೊಂಡಿರುವ ಮೈತ್ರಿಗಳ ವಿರುದ್ಧ ನನ್ನ ಹೋರಾಟ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಪಕ್ಷದಲ್ಲಿದ್ದಾಗ ತಮಗೆ ಎದುರಾಗಿದ್ದ ಮುಜುಗರದ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಉದ್ದೇಶಿಸಿದ್ದ ತ್ರಿಭಾಷಾ ನೀತಿಯನ್ನು (ಹಿಂದಿ ಕಲಿಕೆ ಪ್ರಸ್ತಾಪ) ತಾವು ಒಪ್ಪುವುದಿಲ್ಲ ಮತ್ತು ತಮಿಳು ಭಾಷೆಯ ಹಿತರಕ್ಷಣೆಗೆ ಬದ್ಧ ಎಂದು ಘೋಷಿಸಿದ್ದಾರೆ.

ಕರ್ನಾಟಕದ ಕೇಡರ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರೂ, ತಾವು ತಮಿಳುನಾಡಿನ ಮಣ್ಣಿನ ಮಗನಾಗಿ ತಮಿಳುನಾಡು ರೈತರ ಹಿತರಕ್ಷಣೆಗೆ ಹಾಗೂ ಕಾವೇರಿ ನೀರಿನ ಹಕ್ಕಿಗಾಗಿ ಹೋರಾಡುವುದಾಗಿ ಹೇಳಿದ್ದಾರೆ. ತಮ್ಮನ್ನು ಬೆಂಬಲಿಸಿರುವ ಜನರ, ' ನಿರೀಕ್ಷೆ ಸುಳ್ಳಾಗುವುದಿಲ್ಲ' ಎಂದಿದ್ದಾರೆ.

'ವಿ ದಿ ಲೀಡರ್ಸ್' ಎಂಬ ಅಭಿಯಾನವನ್ನು ಅಣ್ಣಾಮಲೈ ಆರಂಭಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಧಿಕೃತ ರಾಜಕೀಯ ಪಕ್ಷವಾಗಿ ಇದು ಬದಲಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜಕಾರಣ ಎಂಬುದು ಯಾವುದೇ ಒಂದು ಕುಟುಂಬ ಅಥವಾ ವ್ಯಕ್ತಿಯ ಆರಾಧನೆಯಾಗಬಾರದು. ನಾವು ತಮಿಳುನಾಡಿನಲ್ಲಿ ಸಾಮಾನ್ಯ ಜನರ ರಾಜಕಾರಣವನ್ನು ತರಲಿದ್ದೇವೆ ಎಂದು ಘೋಷಿಸಿದ್ದಾರೆ. ಜನಪ್ರತಿನಿಧಿಗಳ ಅಧಿಕಾರಾವಧಿಗೆ ನಿರ್ದಿಷ್ಟ ಮಿತಿ ಇರಬೇಕು ಎಂದು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭೂತಪೂರ್ವ ಜಯ ಗಳಿಸಿತ್ತು. ಇದೇ ರೀತಿಯಲ್ಲಿ ಅಣ್ಣಾಮಲೈ ಹೊಸ ಪಕ್ಷ ಕಟ್ಟುವುದರೊಂದಿಗೆ ತಮಿಳುನಾಡಿನ ರಾಜಕೀಯ ಸಮೀಕರಣ ಬದಲಾಗಲಿದೆಯೇ ಕಾದು ನೋಡಬೇಕಿದೆ. 



(ಆಧಾರ: ವಿವಿಧ ಸುದ್ದಿ ಮೂಗಳಿಂದ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries