ಮುಳ್ಳೇರಿಯ: ಮನೆಯೊಂದು ಕುಸಿದು ಬಿದ್ದು ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದಾಗ ಮವ್ವಾರು ಶೌರ್ಯ ಘಟಕ ಕಾರ್ಯಕರ್ತರ ಸಹಾಯದಿಂದ ದುರಸ್ತಿ ನಡೆಸಲಾಗಿದೆ. ಮೊನ್ನೆ ಬೆಳಿಗ್ಗೆ ಕುಂಬ್ಡಾಜೆ ಪಂಚಾಯತಿಯ 9ನೇ ವಾರ್ಡ್ ಮವ್ವಾರು ಎಸ್‍ಸಿ ನಗರ ನಿವಾಸಿ ಬಾಬು (50) ಎಂಬವರ ಮನೆ ಕುಸಿದು ಬಿದ್ದಿದೆ. ಮನೆ ಜೀರ್ಣಗೊಂಡ ಹಿನ್ನೆಲೆಯಲ್ಲಿ ಇವರು ಒಂದು ಬದಿಗೆ ಪ್ಲಾಸ್ಟಿಕ್ ಟರ್ಪಾಲ್ ಕಟ್ಟಿ ಅದರಲ್ಲಿ ವಾಸ ಮಾಡುತ್ತಿದ್ದರು. ಇದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮನೆ ಬಿದ್ದ ಮಾಹಿತಿ ತಿಳಿದು 8ನೇ ವಾರ್ಡ್ ಸದಸ್ಯ ಕೊರಗಪ್ಪ ಸ್ಥಳಕ್ಕೆ ತಲುಪಿ 9ನೇ ವಾರ್ಡ್ ಪ್ರತಿನಿಧಿ, ಪಂಚಾಯತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮವ್ವಾರು ಶೌರ್ಯ ತಂಡ ಘಟಕದ ಕಾರ್ಯಕರ್ತರು ತಲುಪಿ ರಾತ್ರಿ 11 ಗಂಟೆವರೆಗೆ ಕೆಲಸ ಮಾಡಿ ಮನೆಯನ್ನು ದುರಸ್ತಿಗೊಳಿಸಿ ನೀಡಿದ್ದಾರೆ. ಮನೆ ದುರಸ್ತಿಗೆ ಬೇಕಾದ ಕಂಗು ಹಾಗೂ ಇತರ ಸಾಮಗ್ರಿಗಳನ್ನು ರವೀಂದ್ರ ರೈ ಗೋಸಾಡ ನೀಡಿದ್ದು, ನೆರೆಮನೆಯಿಂದ ಹಳೆ ಹೆಂಚು ತಂದು ದುರಸ್ತಿಗೊಳಿಸಲಾಗಿದೆ. ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡಿದ ಶೌರ್ಯ ಕಾರ್ಯಕರ್ತರ ಈ ಕೆಲಸ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ.

.jpg)
.jpg)
