ಕಾಸರಗೋಡು: ಬಿರುಸಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಂಪುಕಲ್ಲು ಕ್ವಾರಿಗಳಿಂದ ಕಲ್ಲು ತೆಗೆಯುವುದು ಮತ್ತು ವಿವಿಧೆಡೆಯಿಂದ ಮಣ್ಣು ತೆಗೆಯುವಂತಹ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ತಹಶೀಲ್ದಾರರು ಮತ್ತು ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕರ ಸಭೆಯಲ್ಲಿ ಈ ಬಗ್ಗೆ ನಿರ್ದೇಶ ನೀಡಲಾಗಿದೆ. ಹೌಸ್‍ಬೋಟಿಂಗ್, ಚಾರಣ, ದೋಣಿ ವಿಹಾರ, ಕಯಾಕಿಂಗ್ ಮತ್ತು ಕ್ರೀಡಾ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಬರ್ಂಧಿಸಬೇಕು ಹಾಗೂ ಸಮುದ್ರ ಮತ್ತು ನದಿಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಮತ್ತು ಕರಾವಳಿ ನಿವಾಸಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆಸೂಚಿಸಲಾಯಿತು.
'ಮಾನ್ಸೂನ್-ತುಲಾವರ್ಷ ಸಿದ್ಧತೆ ಮಾರ್ಗಸೂಚಿಗಳು ಕಿತ್ತಳೆ ಪುಸ್ತಕ 2025' ರ ಪ್ರಕಾರ ವಿವರವಾದ ವಿಪತ್ತು ತಗ್ಗಿಸುವಿಕೆ ಪ್ರತಿಕ್ರಿಯೆ ಮಾರ್ಗಸೂಚಿ ಜಾರಿಗೆ ತರಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ಎಡಿಎಂ ಕೆ.ವಿ. ಶ್ರುತಿ ಅಧ್ಯಕ್ಷತೆ ವಹಿಸಿದ್ದರು. ವಿಪತ್ತು ಪೀಡಿತ ಪ್ರದೇಶಗಳಲ್ಲಿ ಅಲ್ಲಿನ ಜನತೆಗೆ ಜಾಗ್ರತೆ ಪಾಲಿಸಲು ಸೂಚಿಸಲಾಗಿದ್ದು, ತಾಲ್ಲೂಕು ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ನಿರ್ದೇಶಿಸಲಾಯಿತು. ಪರಿಹಾರ ಶಿಬಿರಗಳನ್ನು ಸ್ಥಾಪಿಸಲಗಿದ್ದು, ಈ ಬಗ್ಗೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈಬಗ್ಗೆ ಜಂಟಿ ನಿರ್ದೇಶಕರು ಎಲ್ಲಾ ಪಂಚಾಯಿತಿ ಕಾರ್ಯದರ್ಶಿಗಳ ಸಭೆ ನಡೆಸಿ, ನಿಯಂತ್ರಣಕೊಠಡಿ ಸ್ಥಾಪಿಸುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

