HEALTH TIPS

ಕೇರಳ ವಿದ್ಯಮಾನ ಕಲಿಸಿದ ಪಾಠ: ಕದನ ಗೆದ್ದರೂ ಇಲಿ ತಿಂದ ಹಾವಿನಂತಾದ ಕಾಂಗ್ರೆಸ್ ಹೈಕಮಾಂಡ್!

ಒಂದು ದಶಕದ ಸುದೀರ್ಘ ಅವಧಿಯ ಬಳಿಕ ಕೇರಳದಲ್ಲಿ ಭರ್ಜರಿ ಚುನಾವಣಾ ವಿಜಯವನ್ನು ಗಳಿಸಿದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ದೊಡ್ಡ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಅಂತಿಮವಾಗಿ ಜಯಗಳಿಸಿದ್ದು ವಿವೇಕ. ಅದರ ಫಲವಾಗಿ ಸೂಕ್ತ ವ್ಯಕ್ತಿಯೇ ಆಯ್ಕೆಯಾದರು.

ಆದರೆ, ಈ ಪ್ರಕ್ರಿಯೆಯಲ್ಲಿ ಬಹಳಷ್ಟು ಸಮಯ ವ್ಯರ್ಥವಾಯಿತು ಮತ್ತು ಅದಕ್ಕಿಂತ ಮುಖ್ಯವಾಗಿ, ಪಕ್ಷವು ಗೌರವವನ್ನು ಕಳೆದುಕೊಂಡಿತು.

ನಿರ್ಧಾರ ತೆಗೆದುಕೊಳ್ಳಲು ತಡವಾದಷ್ಟೂ ಪಕ್ಷದ ರಾಜ್ಯ ನಾಯಕತ್ವ ಮತ್ತು ರಾಷ್ಟ್ರೀಯ ನಾಯಕತ್ವದ ವರ್ಚಸ್ಸು ಕುಂದುತ್ತಾ ಹೋಗುತ್ತದೆ. ಇತಿಹಾಸದ ಅನಿವಾರ್ಯ ಪ್ರಕ್ರಿಯೆಗಳ ಮುಂದೆ ಪಕ್ಷದ ಹಿರಿಯ ನಾಯಕರು ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಅವರಿಗೆ ಯಾವುದೇ ನಿರ್ಣಯ ಕೈಗೊಳ್ಳುವ ಶಕ್ತಿ ಅಥವಾ ಚೌಕಟ್ಟು ಇಲ್ಲದಂತಾಗಿತ್ತು.

ಜನರು ಮತಪೆಟ್ಟಿಗೆಯ ಮೂಲಕ ತಮ್ಮ ತೀರ್ಪನ್ನು ನೀಡಿದ್ದರು. ಅವರು ಬಹಳ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದವರ ಗದ್ದಲದ ನಡುವೆ ತಮ್ಮ ಧ್ವನಿಯನ್ನು ಎತ್ತಿ ಹೇಳುವ ಧೈರ್ಯ ಪಕ್ಷದ ನಾಯಕರಿಗೆ ಇರಲಿಲ್ಲ.

ಜನರ ತೀರ್ಪು ಇಷ್ಟು ಸ್ಪಷ್ಟವಾಗಿದ್ದರೂ, ಒಂದು ವೇಳೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ ಏನಾಗುತ್ತಿತ್ತು? ಮತದಾರರು ಈ ಫಲಿತಾಂಶವನ್ನು ಶಾಂತಿಯುತವಾಗಿ ಒಪ್ಪಿಕೊಳ್ಳುತ್ತಿದ್ದರೇ? ರಾಜ್ಯ ಕಾಂಗ್ರೆಸ್ ಘಟಕವೇ ಯಾವುದೇ ಪ್ರತಿರೋಧವಿಲ್ಲದೆ ಸುಮ್ಮನಿರುತ್ತಿತ್ತೇ? ಸೋತ ಪಕ್ಷಗಳು ಯಾವ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದವು? ಮತದಾರರು ತಮಗೆ ಅನ್ಯಾಯವಾಯಿತು ಎಂದು ಭಾವಿಸುತ್ತಿರಲಿಲ್ಲವೇ?

ಒಂದು ವೇಳೆ ಜನರ ತೀರ್ಪು ಇಷ್ಟು ಸ್ಪಷ್ಟವಾಗಿದ್ದರೂ ಕೂಡ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದೇ ಇದ್ದರೆ ಏನಾಗುತ್ತಿತ್ತು? ಮತದಾರರು ಈ ಫಲಿತಾಂಶವನ್ನು ಶಾಂತಿಯುತವಾಗಿ ಒಪ್ಪಿಕೊಳ್ಳುತ್ತಿದ್ದರೇ? ರಾಜ್ಯ ಕಾಂಗ್ರೆಸ್ ಘಟಕವೇ ಯಾವುದೇ ಪ್ರತಿರೋಧವಿಲ್ಲದೆ ಸುಮ್ಮನಿರುತ್ತಿತ್ತೇ? ಸೋತ ಪಕ್ಷಗಳು ಯಾವ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದವು? ಮತದಾರರು ತಮಗೆ ಅನ್ಯಾಯವಾಯಿತು ಎಂದು ಭಾವಿಸುತ್ತಿರಲಿಲ್ಲವೇ?

ಎದುರಿಗಿರುವ ಗಂಭೀರ ಪ್ರಶ್ನೆಗಳು

ಮುಖ್ಯಮಂತ್ರಿಯಾಗಿ ಜನ ಯಾರನ್ನು ಬಯಸಿದ್ದರು ಎಂಬುದು ಸ್ಪಷ್ಟವಾಗಿತ್ತು-ಹಿಂದಿನ ಸರ್ಕಾರ ಮತ್ತು ಅದರ ನಾಯಕತ್ವವನ್ನು ಎದುರಿಸಲು ಪಕ್ಷವನ್ನು ಬೀದಿಗಳಲ್ಲಿ ಮತ್ತು ವಿಧಾನಸಭೆಯ ಒಳಗೆ ಮುನ್ನಡೆಸಿದ ವ್ಯಕ್ತಿಯೇ ಅವರ ಆಯ್ಕೆಯಾಗಿದ್ದರು. ಇಂತಹ ಸಂದರ್ಭದಲ್ಲಿ ಉದ್ಭವಿಸಬಹುದಾದ ರಾಷ್ಟ್ರಮಟ್ಟದ ಪರಿಣಾಮಗಳನ್ನು ಕೇವಲ ಕಲ್ಪಿಸಿಕೊಳ್ಳಬಹುದು.

ಆದರೆ ಈ ವಿಷಯದಲ್ಲಿ ಯಾವುದೇ ಸಂಶಯವಿರಲಿಲ್ಲ: ಕಾಂಗ್ರೆಸ್ನ ಸಿದ್ಧಾಂತವು ಹಿಂದುತ್ವ ಪ್ರತಿಪಾದಕರಿಗೆ ಮುಳ್ಳಾಗಿದ್ದ ಕಾರಣ ಆ ಪಕ್ಷವು ಭಾರತದಿಂದಲೇ ಸಂಪೂರ್ಣವಾಗಿ ಅಳಿಸಿಹೋಗಬೇಕು ಎಂದು ಬಯಸುವ ಬಿಜೆಪಿ, ಈ ಗೊಂದಲದ ಲಾಭವನ್ನು ಸಂಪೂರ್ಣವಾಗಿ ಪಡೆಯುತ್ತಿತ್ತು.

ವಾಸ್ತವವಾಗಿ, ಇವು ಕಾಂಗ್ರೆಸ್ ನಾಯಕತ್ವದ ಮುಂದಿರುವ ಗಂಭೀರ ಪ್ರಶ್ನೆಗಳು. ಚುನಾವಣೆಗಳಲ್ಲಿ ಗೆಲ್ಲುವ ಅಭ್ಯಾಸವನ್ನೇ ಕಳೆದುಕೊಂಡಿರುವ ಪಕ್ಷವು, ಒಮ್ಮೊಮ್ಮೆ ಗೆದ್ದರೂ ಅದನ್ನು ಸರಿಯಾಗಿ ನಿಭಾಯಿಸಲಾಗದೆ ಸ್ವಯಂ-ಹಾನಿ ಮಾಡಿಕೊಳ್ಳುತ್ತದೆ. ಕೇರಳದ ಉದಾಹರಣೆ ಇದಕ್ಕೆ ತಾಜಾ ಉದಾಹರಣೆ. ಒಂದು ಸುಲಭವಾದ ಗೆಲುವನ್ನು ಕೂಡಾ ಸಮರ್ಥವಾಗಿ ನಿಭಾಯಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಅದು ಸಾಕ್ಷಿ.

ಉದಾಸೀನ ಮನೋಭಾವ

ಆದರೆ ಕೇರಳದಲ್ಲಿ ನಡೆದದ್ದೇನೂ ಹೊಸತಲ್ಲ. ನಾಯಕತ್ವದ ದೌರ್ಬಲ್ಯದಿಂದ ಉಂಟಾದ ತೃಪ್ತಿದಾಯಕವಲ್ಲದ ಫಲಿತಾಂಶಗಳ ದೀರ್ಘ ಸರಣಿಯಲ್ಲಿ ಇದು ಕೇವಲ ಇತ್ತೀಚಿನ ಘಟನೆ.

2021ರಲ್ಲಿ ಪಂಜಾಬ್‌ನಲ್ಲಿ, ಆಂತರಿಕ ಕಚ್ಚಾಟದ ನಂತರ ಕಾಂಗ್ರೆಸ್ ತನ್ನದೇ ಮುಖ್ಯಮಂತ್ರಿಯನ್ನು ಅವಮಾನಕರವಾದ ರೀತಿಯಲ್ಲಿ ಅಧಿಕಾರದಿಂದ ಕೆಳಗಿಳಿಸಿತು. ತದನಂತರ, ರಾಜ್ಯ ಪಕ್ಷದ ಅಧ್ಯಕ್ಷತೆಯಂತಹ ಅತ್ಯಂತ ಪ್ರಮುಖ ಜವಾಬ್ದಾರಿಯನ್ನು ಕ್ರಿಕೆಟ್ ಮೈದಾನದಲ್ಲಿ ಮಾತ್ರವೇ ಹೆಸರು ಮಾಡಿದ್ದ ವ್ಯಕ್ತಿಯೊಬ್ಬರಿಗೆ ವಹಿಸಿಕೊಟ್ಟಿತು. ಅಂದಿನಿಂದ, ಆ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ನೆಲೆ ಮತ್ತು ಸ್ಥಿರತೆಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ.

ಇಲಿ ತಿಂದ ಹಾವಿನಂತೆ

ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ, ಬೇರೂರಿದ್ದ ಬಿಜೆಪಿಯನ್ನು ಮತ್ತು ಅದರ ಸುಸಜ್ಜಿತ ಪಕ್ಷದ ಯಂತ್ರವನ್ನು ಮಣಿಸಿ ಕಾಂಗ್ರೆಸ್ ಅಧಿಕಾರ ಹಿಡಿದದ್ದು ಒಂದು ಗಮನಾರ್ಹ ಉದಾಹರಣೆ. ಅನೇಕ ನಾಗರಿಕ ಸಮಾಜದ ಸಂಘಟನೆಗಳು ಪರೋಕ್ಷವಾಗಿ ಆದರೆ ಅತ್ಯುತ್ಸಾಹದಿಂದ ಕಾಂಗ್ರೆಸ್ನ ಈ ಸ್ಮರಣೀಯ ಗೆಲುವಿಗೆ ಕೊಡುಗೆ ನೀಡಿದ್ದವು ಎಂಬುದರಲ್ಲಿ ಅನುಮಾನವಿಲ್ಲ.

ಆದರೆ, ಇದೀಗ ಪಕ್ಷದಲ್ಲಿ ಒಂದು ಬಗೆಯ ಉದಾಸೀನ ಮನೋಭಾವ ಆವರಿಸಿರುವಂತೆ ಕಾಣುತ್ತಿದೆ. ಪಕ್ಷದ ಪ್ರಮುಖ ಬಣಗಳು ಕೀಳುಮಟ್ಟದ ಸಂಘರ್ಷ ಮತ್ತು ಪರಸ್ಪರ ದ್ವೇಷದಲ್ಲಿ ಸಮಯ ವ್ಯರ್ಥ ಮಾಡುತ್ತಿವೆ. ಅಲ್ಲದೆ, 'ಹೈಕಮಾಂಡ್' ಏನು ಹೇಳುತ್ತದೆಂದು ಕೇಳಲು ಕೆಲವು ವಾರಕ್ಕೊಮ್ಮೆ ದೆಹಲಿಗೆ ದೌಡಾಯಿಸುತ್ತಿವೆ. ಹೈಕಮಾಂಡ್ ಸಹಜವಾಗಿಯೇ ಇಲಿ ತಿಂದ ಹಾವಿನಂತೆ ಮೌನವಾಗಿ ಕುಂತಿದೆ; ತಾನಾಡುವ ಯಾವುದಾದರೂ ಮಾತು ಅಥವಾ ಕ್ರಮದಿಂದ ಅಸ್ತಿತ್ವದಲ್ಲಿರುವ ವ್ಯವಸ್ಥೆ ಹದಗೆಟ್ಟು ಹೋಗಬಹುದು ಎಂಬ ಭಯ ಅದಕ್ಕೆ.

ಕರ್ನಾಟಕದ ಅನಿಶ್ಚಿತತೆ

ಸ್ಪಷ್ಟವಾಗಿ ಹೇಳುವುದಾದರೆ, ಕರ್ನಾಟಕದಲ್ಲಿನ ಸಮಸ್ಯೆ ಉದ್ಭವಿಸಿರುವುದು ಐದು ವರ್ಷಗಳ ಆಡಳಿತಾವಧಿ ಆರಂಭವಾಗುವ ಮುನ್ನವೇ ರಾಷ್ಟ್ರೀಯ ನಾಯಕತ್ವವು ಪ್ರಮುಖ ಬಣಗಳ ನಡುವೆ ಮಾಡಿಕೊಂಡಿದ್ದ ಅಧಿಕಾರ ಹಂಚಿಕೆಯ ಒಪ್ಪಂದದಿಂದ.

ಮುಖ್ಯಮಂತ್ರಿಯ ಅಧಿಕಾರಾವಧಿ ಅರ್ಧದಷ್ಟು ಮುಗಿದಾಗ, ಅಧಿಕಾರವನ್ನು ಪ್ರತಿಸ್ಪರ್ಧಿ ಬಣಕ್ಕೆ ಹಸ್ತಾಂತರಿಸಬೇಕಿತ್ತು. ಆ ಸಮಯ ಬಂದು ಆರು ತಿಂಗಳು ಕಳೆದಿದ್ದು, ಇದೀಗ ರಾಜ್ಯ ಕಾಂಗ್ರೆಸ್‌ನ ಆಂತರಿಕ ರಾಜಕೀಯದಲ್ಲಿ ಭಾರೀ ಗೊಂದಲ ಉಂಟಾಗಿದೆ. (ಈ ಲೇಖನ ಪ್ರಕಟವಾಗುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರ ನಡೆಯುವುದು ಖಚಿತವಾಗಿದೆ ಹಾಗೂ ಜೂ. 3ರಂದು ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಲಿದ್ದಾರೆ.)

ಇಂತಹ ಪರಿಸ್ಥಿತಿಯಲ್ಲಿ ಆಡಳಿತಾರೂಢ ಪಕ್ಷ ಮತ್ತು ಸರ್ಕಾರವು ಶಾಂತಿ ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳುತ್ತವೆ. ಅದೃಷ್ಟವಶಾತ್ ಕಾಂಗ್ರೆಸ್ಗೆ, ಮತ್ತೆ ಅಧಿಕಾರಕ್ಕೆ ಬರಲು ಬೇಕಾದ ಸಾಂಸ್ಥಿಕ ಬಲವನ್ನು ಹೊಂದಿರುವ ರಾಜ್ಯ ಬಿಜೆಪಿ ಕೂಡ ಆಳವಾದ ವಿಭಜನೆ ಮತ್ತು ಬಣ ಬಡಿದಾಟದಲ್ಲಿ ಸಿಲುಕಿದಂತೆ ಕಾಣುತ್ತಿದೆ.

ತಲೆ ಎತ್ತುವ ಬಣಗಳು

ಸಮಾಜದಲ್ಲಿ ತೃಪ್ತಿಪಡಿಸಬೇಕಾದ ಅನೇಕ ಸಾಮಾಜಿಕ ಗುಂಪುಗಳಿದ್ದಾಗ ಮತ್ತು ಅವುಗಳಲ್ಲಿ ಹಲವು ಸಾರ್ವಜನಿಕ ಜೀವನದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವ ಬೀರುವಷ್ಟು ಶಕ್ತಿಯುತವಾಗಿದ್ದಾಗ ಬಣಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಸಿದ್ಧಾಂತದ ಬಂಧವು ಅಂಟು ಕಳೆದುಕೊಂಡು ವಿಫಲವಾಗುತ್ತದೆ.

ಬಣದ ಮುಖ್ಯಸ್ಥರಾಗಿ ಪ್ರಭಾವಶಾಲಿ ವ್ಯಕ್ತಿಗಳು ಸುತ್ತಮುತ್ತ ಇದ್ದಾಗ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಈ ಸಮಸ್ಯೆಯಿಂದ ಬಳಲುತ್ತಿವೆ.

ಇತ್ತೀಚೆಗೆ, ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪಕ್ಷದ ರಾಜ್ಯ ಘಟಕವು ತನ್ನ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳದೇ ಬೇರೆ ದಾರಿಯಿಲ್ಲ ಎಂದು ಸೂಚಿಸಿದರು. ಇದು ಹೊರನೋಟಕ್ಕೆ ಮೃದುವಾಗಿ ಕಂಡರೂ, ಇದು ಅವರ ಅಸಮರ್ಥತತೆಯನ್ನು ಗಂಭೀರವಾಗಿ ಖಂಡಿಸಿದ್ದಾಗಿದೆ.

ನೆರವೇರದ ಛತ್ತೀಸ್‌ಘಡದ ಭರವಸೆ

ಕರ್ನಾಟಕದ ಸ್ಥಿತಿಗೆ ಹೋಲಿಕೆಯಾಗುವ ಪರಿಸ್ಥಿತಿ ಹಿಂದೆ ಛತ್ತೀಸ್‌ಘಡದಲ್ಲಿ ಉದ್ಭವಿಸಿತ್ತು. ಹಿಂದುಳಿದ ವರ್ಗದ ಪ್ರಮುಖ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು, ಆದರೆ ಸುಶಿಕ್ಷಿತ ಶ್ರೀಮಂತ ವರ್ಗಕ್ಕೆ ಸೇರಿದ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರಿಗೆ ಅಧಿಕಾರಾವಧಿಯ ಎರಡನೇ ಭಾಗದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಎಂದಿಗೂ ಈಡೇರಲೇ ಇಲ್ಲ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿತು. ಅದಕ್ಕಾಗಿ ಇಲ್ಲಿ ಬಿಜೆಪಿ ಸಂಪೂರ್ಣವಾಗಿ ಸಜ್ಜಾಗಿತ್ತು.

ಈ ಕಹಿ ಸೋಲಿಗೆ ಕಾರಣವೇನು? ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ ಬಗ್ಗೆ ತಕ್ಕಮಟ್ಟಿಗೆ ಉತ್ತಮ ವರದಿಯನ್ನೇ ನೀಡಿತ್ತು. ಸಹಜವಾಗಿಯೇ ಇಲ್ಲಿ ಸ್ಥಳೀಯ ರಾಜಕೀಯದ ಆಯಾಮಗಳು ಕೆಲಸ ಮಾಡಿರಬಹುದು, ಆದರೆ ರಾಜ್ಯ ಕಾಂಗ್ರೆಸ್ನೊಳಗೆ ಕುದಿಯುತ್ತಿದ್ದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

ಇತ್ತೀಚಿನ ಕೇರಳದ ಪ್ರಕರಣದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿದ್ದರೂ, ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಉಸ್ತುವಾರಿ ವಹಿಸಿದ್ದ ಪ್ರಧಾನ ಕಾರ್ಯದರ್ಶಿಯೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದು ಆಸಕ್ತಿದಾಯಕವಾಗಿತ್ತು. ಇತ್ತೀಚಿನವರೆಗೂ, ಈ ವ್ಯಕ್ತಿ ಮಾಜಿ ಕಾಂಗ್ರೆಸ್ ಅಧ್ಯಕ್ಷರ ಕಾರ್ಯದರ್ಶಿಯಾಗಿದ್ದರು. ದಿವಂಗತ ಅಹ್ಮದ್ ಪಟೇಲ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದಂತೆ ಇವರ ಪಾತ್ರವೂ ಅದೇ ಮಾದರಿಯದ್ದಾಗಿತ್ತು.

ಅಹ್ಮದ್ ಪಟೇಲ್ ಅವರಿಗೆ ರಾಜಕೀಯದ ಒಳಸುಳಿಗಳು ಚೆನ್ನಾಗಿ ತಿಳಿದಿದ್ದವು. ಪಕ್ಷದ ಸಂಕೀರ್ಣ ಕಾರ್ಯವೈಖರಿ ಮತ್ತು ರಾಜ್ಯ ಘಟಕಗಳ (ಅಧಿಕಾರದಲ್ಲಿರುವ ಸರ್ಕಾರಗಳೂ ಸೇರಿದಂತೆ) ಆಂತರಿಕ ವಿಷಯಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವಿತ್ತು. ಪಕ್ಷದ ವ್ಯವಸ್ಥೆಯೊಳಗೆ ನಡೆಯುವ ಗೂಢ ರಾಜಕೀಯದ ಚಕ್ರಗಳ ಜ್ಞಾನ ಅವರಿಗೆ ಇತ್ತು. ಗುಜರಾತ್‌ನಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರೋಧದ ನಡುವೆಯೂ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ, ಶಾ ಅವರ ತಂತ್ರಗಳನ್ನು ಅಹ್ಮದ್ ಪಟೇಲ್ ವಿಫಲಗೊಳಿಸಿದ್ದರು.

ಕಾಂಗ್ರೆಸ್‌ನ ಉನ್ನತ ನಾಯಕತ್ವದ ಪ್ರಮುಖ ಆಪ್ತ ಸಹಾಯಕರಾಗಿದ್ದ ಅಹ್ಮದ್ ಪಟೇಲ್, ತಮ್ಮ ದೀರ್ಘಕಾಲದ ರಾಜಕೀಯ ಜೀವನದಲ್ಲಿ ಎಂದಾದರೂ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಯಾಗಿದ್ದರೇ? 2017ರಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರದ ಅಂಚಿಗೆ ಬಂದಿದ್ದ ಸಂದರ್ಭದಲ್ಲೂ ಇದು ಸಾಧ್ಯವಾಗಿಲ್ಲ. ಅಂತಹ ಸನ್ನಿವೇಶವು ಕೇವಲ ಅತ್ಯಂತ ಗಂಭೀರ ಅಥವಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಾಧ್ಯವಾಗಬಹುದೇ ಹೊರತು, ಸಾಮಾನ್ಯ ಸಮಯದಲ್ಲಿ ಅಲ್ಲ. ಇದಕ್ಕೆ ಕಾರಣವೇನೆಂದರೆ, ಅಹ್ಮದ್ ಪಟೇಲ್ ನಿರ್ವಹಿಸುತ್ತಿದ್ದ ಹುದ್ದೆಯು ಅಂತಹದ್ದು, ಆ ಸ್ಥಾನದಲ್ಲಿ ಯಾರನ್ನಾದರೂ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ.

ಉನ್ನತ ನಾಯಕತ್ವಕ್ಕೆ ಇರಬೇಕು ದಮ್ಮು

ಈ ರಾಜಕೀಯದಾಟವನ್ನು ಅಂತಿಮವಾಗಿ ವಿಶ್ಲೇಷಣೆ ಮಾಡುವುದಾದರೆ, ಕಾಂಗ್ರೆಸ್ನ ಕಷ್ಟಗಳಿಗೆ ಅದರ ನಾಯಕತ್ವವೇ ಕಾರಣ. ಇದನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲೇಬೇಕು. ರಾಜ್ಯ ಘಟಕಗಳು ಬಲವಾಗಿದ್ದಾಗ ಮಾತ್ರ ರಾಷ್ಟ್ರೀಯ ನಾಯಕತ್ವವು ಬಲವಾಗಿರುತ್ತದೆ; ಇದಕ್ಕಿನ್ನು ಬೇರೆ ದಾರಿಯೇ ಇಲ್ಲ.

ಉನ್ನತ ನಾಯಕತ್ವ ಬಲವಾಗಿದ್ದಾಗ, ಅದು ರಾಜ್ಯಗಳಲ್ಲಿನ ಶಾಸಕರಿಗೆ ಮತ್ತು ಸಂಸತ್ತಿನಲ್ಲಿ ತನ್ನ ಅಧೀನದಲ್ಲಿರುವವರಿಗೆ ಗೌರವಯುತವಾದ ಸೂಚನೆಗಳನ್ನು ನೀಡಬಲ್ಲದು, ಆಗ 'ಹೈಕಮಾಂಡ್' ಎನ್ನುವ ಪದಕ್ಕೆ ನಿಜವಾದ ಅರ್ಥವಿರುತ್ತದೆ. ಇಂದಿರಾಗಾಂಧಿ ಅವರ ಕಾಲದವರೆಗೆ ಈ ಮೂಲಭೂತ ತತ್ವವು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿತ್ತು, ಆದರೆ ನಂತರದ ದಿನಗಳಲ್ಲಿ ಪಕ್ಷದ ಸಂಘಟನೆ ಕ್ಷೀಣಿಸುತ್ತಾ ಹೋಯಿತು.

ಇವೆಲ್ಲದರ ಬಗ್ಗೆ ಚರ್ಚಿಸುತ್ತ ಕುಳಿತರೆ ಅದು ದೊಡ್ಡ ಕಥೆಯೇ ಆಗುತ್ತದೆ. ಆದರೆ ವಿಷಯದ ತಿರುಳು ಎಂದರೆ 'ಚುನಾಯಿತ ನಾಯಕತ್ವದ ತತ್ವ'. ಜಿಲ್ಲಾ ಮತ್ತು ರಾಜ್ಯ ಘಟಕಗಳು ಹಾಗೂ ಎಐಸಿಸಿ ಸರಿಯಾದ ಚುನಾವಣೆ ಮೂಲಕ ಆಯ್ಕೆಯಾದಾಗ, ಆ ಆಯ್ಕೆಯಾದ ರಾಷ್ಟ್ರೀಯ ನಾಯಕತ್ವವು ಪಕ್ಷದ ಒಳಗೆ ಮತ್ತು ಹೊರಗೆ ಸಹಜವಾಗಿಯೇ ರಾಷ್ಟ್ರವ್ಯಾಪಿ ಅಧಿಕಾರವನ್ನು ಹೊಂದಿರುತ್ತದೆ. ಇಲ್ಲದಿದ್ದರೆ, ಇಡೀ ವ್ಯವಸ್ಥೆಯು ಕೃತಕವಾಗಿ ಅಥವಾ ಅಸಮರ್ಪಕವಾಗಿ ಕಾಣುತ್ತದೆ.

ಪಕ್ಷವು ರಾಜ್ಯ ಚುನಾವಣೆಯಲ್ಲಿ ಗೆದ್ದಾಗ, ರಾಷ್ಟ್ರೀಯ ನಾಯಕತ್ವವು ತನ್ನ ವೀಕ್ಷಕರನ್ನು ಕಳುಹಿಸಿ, ಚುನಾಯಿತ ಶಾಸಕರು ಸಂಪೂರ್ಣ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅವಲೋಕಿಸಿ ತಮ್ಮ ನಾಯಕನನ್ನು ಆಯ್ಕೆ ಮಾಡುವಂತೆ ನೋಡಿಕೊಳ್ಳಬೇಕು. ಛತ್ತೀಸ್ಗಢದಲ್ಲಿ ನಾವು ಕಂಡಂತೆ, ಮತ್ತು ಕರ್ನಾಟಕ ಕಾಂಗ್ರೆಸ್ನ ಈಗಿನ ಅಸ್ಥಿರ ಸ್ಥಿತಿಯಲ್ಲಿ ಕಾಣುತ್ತಿರುವಂತೆ, ಎಂದಿಗೂ ಈಡೇರದ ಮಧ್ಯಮ ಮಾರ್ಗದ ರಾಜಿಗಳನ್ನು ಮಾಡಿಕೊಳ್ಳುವುದನ್ನು ತಡೆಯಬೇಕು.

ಯಾವುದೇ ಸ್ಥಳೀಯ ಬಲಿಷ್ಠ ನಾಯಕನು ಚುನಾಯಿತ ಉನ್ನತ ನಾಯಕರ ಅಧಿಕಾರವನ್ನು ಮೀರಿ ಹೋಗುವುದು ಕಷ್ಟ, ಏಕೆಂದರೆ ಅಂತಹ ಯಾವುದೇ ಪ್ರಯತ್ನವು ಭಾರೀ ರಾಜಕೀಯ ಬೆಲೆ ತೆರಬೇಕಾಗುತ್ತದೆ. ಇದೇ ನಿಜವಾದ ಸಂದೇಶ.

ಬೀದಿಗಿಳಿದು ನಡೆಸುವ ಹೋರಾಟ

ನೀಟ್ ಪರೀಕ್ಷೆಯ ವೈಫಲ್ಯ, ಹೆಚ್ಚುತ್ತಿರುವ ನಿರುದ್ಯೋಗ, ಗಗನಕ್ಕೇರುತ್ತಿರುವ ಬೆಲೆಗಳು ಮತ್ತು ಪ್ರಬಲ ಜಾಗತಿಕ ಶಕ್ತಿಗಳಿಗೆ, ವಿಶೇಷವಾಗಿ ಅಮೆರಿಕಕ್ಕೆ ಅಧೀನವಾಗಿರುವ ಭಯದ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿರುವ ಕಾರಣದಿಂದಾಗಿ ದೇಶದ ಯುವಜನತೆಯಲ್ಲಿ ತೀವ್ರ ಅಸಮಾಧಾನವಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ನಾಯಕತ್ವವು ನಿಜವಾದ ಒತ್ತಡ ಹೇರುವಲ್ಲಿಅಸಮರ್ಥವಾಗಿದೆ. ಇದರರ್ಥ, ಕಾನೂನಿನ ಚೌಕಟ್ಟಿನೊಳಗೆ ದೇಶದ ಎಲ್ಲಾ ಭಾಗಗಳಲ್ಲಿ ಬೀದಿಗಿಳಿದು ಹೋರಾಟಗಳನ್ನು ನಡೆಸುವಲ್ಲಿ ಅದು ವಿಫಲವಾಗಿದೆ.

ಮೇಲಧಿಕಾರದಿಂದ ಬರುವ ಕೇವಲ ಹೇಳಿಕೆಗಳು-ಅವು ಎಷ್ಟು ಅರ್ಥಪೂರ್ಣವಾಗಿರಲಿ ಅಥವಾ ಆಕರ್ಷಕವಾಗಿರಲಿ-ಯಾವುದೇ ಬದಲಾವಣೆಯನ್ನು ತರುವುದಿಲ್ಲ. ಅಲ್ಲದೆ, ಪ್ರಬಲವಾಗಿ ಬೇರೂರಿರುವ ಆಡಳಿತಾರೂಢ ಪಕ್ಷವನ್ನು ಎದುರಿಸುವ ದೇಶದ ಸಂಕೀರ್ಣ ರಾಜಕೀಯ ವ್ಯವಸ್ಥೆಯಲ್ಲಿ, ಮೈತ್ರಿ ಮಾಡಿಕೊಳ್ಳುವಾಗ ಉತ್ತಮ ಒಪ್ಪಂದಗಳನ್ನು ಪಡೆಯಲು ಸಂಘಟನಾತ್ಮಕ ಶಕ್ತಿ ಇರಬೇಕೇ ಹೊರತು, ಕೇವಲ ಆಂತರಿಕ ಆಸೆಗಳಲ್ಲ.

ಫ್ಯಾಸಿಸ್ಟ್, ಪ್ರಾದೇಶಿಕ, ಜಾತಿ ಅಥವಾ ವ್ಯಕ್ತಿ-ಆಧಾರಿತ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣೆಗಳನ್ನು ನಡೆಸುತ್ತವೆ. ಇತ್ತೀಚಿನ ಅವ್ಯವಸ್ಥೆಗೂ ಮೊದಲು, ಕಾಂಗ್ರೆಸ್ನಂತಹ ಪ್ರಜಾಸತ್ತಾತ್ಮಕ ಪಕ್ಷದಲ್ಲಿ ಅನಿಯಂತ್ರಿತ ಬಣ ಪೈಪೋಟಿ ಇದ್ದರೂ, ಸೂಕ್ತ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಚುನಾವಣೆಗಳು ನಡೆಯುತ್ತಿದ್ದವು. ಅದು ಪಕ್ಷಕ್ಕೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಗಂಭೀರತೆಯನ್ನು ನೀಡುತ್ತಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries